ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಸಿ.ಟಿ.ರವಿ ನಿಲುವಿಗೆ ಗಣೇಶ್ ಕಾರ್ಣಿಕ್ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದಂತೆ ಸರ್ಕಾರದ ವೆಚ್ಚದಲ್ಲಿ ಬಡವರಿಗಾಗಿ ಪ್ರಾರಂಭಿಸಿದ ಅನ್ನ ದಾಸೋಹದ ಯೋಜನೆಯನ್ನು ನಾಡಿನ ಜನತೆ ನಂಬಿರುವ ಅನ್ನದಾತೆಯಾದ ಅನ್ನಪೂರ್ಣೇಶ್ವರಿಯ ಹೆಸರಿನಲ್ಲಿ ಮುಂದುವರಿಸಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

‘ತುರ್ತು ಪರಿಸ್ಥಿತಿಯ
ಕರಾಳ ದಿನಗಳು, ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಹರಣ, ಭ್ರಷ್ಟಾಚಾರ ಮತ್ತು ಲೂಟಿ ಸಂಸ್ಕೃತಿಯಿಂದ ನಾಡಿನ ಜನರನ್ನು ಬಡತನದ ಕೂಪಕ್ಕೆ ತಳ್ಳಿರುವ ಸರ್ವಾಧಿಕಾರಿ ಪ್ರವೃತ್ತಿಯ ನಾಯಕಿಯ ಹೆಸರಿನಲ್ಲಿ ಬಡವರಿಗಾಗಿ ರೂಪಿಸಿರುವ ಯೋಜನೆಗಳನ್ನು ನಡೆಸುವುದು ಎಷ್ಟು ಸರಿ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

‘ರಾಷ್ಟ್ರದಾದ್ಯಂತ ಒಂದು ಕುಟುಂಬದ ಸದಸ್ಯರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಸರ್ಕಾರಿ ಯೋಜನೆಗಳು, ವಿಶ್ವ ವಿದ್ಯಾಲಯಗಳು, ಕ್ರೀಡಾಂಗಣಗಳು, ವಿವಿಧ ಪ್ರಶಸ್ತಿಗಳು, ಶೈಕ್ಷಣಿಕ-ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಸುಮಾರು 600ಕ್ಕೂ ಹೆಚ್ಚು
ಇವೆ. ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನ ಮತ್ತು ಗುಲಾಮಿ ಮನಸ್ಥಿತಿಗೆ ಸಾಕ್ಷಿಯಾಗಿದೆ’ ಎಂದಿದ್ದಾರೆ.

‘ನಾಡಿನಾದ್ಯಂತ ನಾಲ್ಕು ಬಾರಿ ಸಂಚರಿಸಿ ಶೃಂಗೇರಿ ಸೇರಿದಂತೆ ನಾಲ್ಕು ಶಾರದಾ ಪೀಠಗಳನ್ನು ಸ್ಥಾಪಿಸಿ ಹಿಂದೂ ಧರ್ಮದ ಅಭಿವೃದ್ಧಿಗೆ ಅನುಪಮ ಸೇವೆ ಸಲ್ಲಿಸಿದ ಯತಿ ಶ್ರೇಷ್ಠರಾದ ಶಂಕರಾಚಾರ್ಯರ ಹೆಸರನ್ನು ಶೃಂಗೇರಿಯ ಸಂಸ್ಕೃತ ಮಹಾವಿದ್ಯಾಲಯಕ್ಕೆ ಇಡಬೇಕು ಎನ್ನುವ ಸಾರ್ವಜನಿಕರ ಬೇಡಿಕೆ ಸಮಂಜಸವಾಗಿದೆ’ ಎಂದು ಅಭಿಪ್ರಾಯ‍ಪಟ್ಟಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು