ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿಬಾರ್‌ ಸರ್ಕಾರಿ ಪ್ರಾಯೋಜಿತ ಹತ್ಯೆ: ಡಿವೈಎಫ್‌ಐ ಅಧ್ಯಕ್ಷ ಮುಹಮ್ಮದ್ ರಿಯಾಝ್‌

Last Updated 4 ಜನವರಿ 2020, 12:28 IST
ಅಕ್ಷರ ಗಾತ್ರ

ಮಂಗಳೂರು: ಡಿಸೆಂಬರ್‌ 19ರಂದು ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಕರ್ನಾಟಕ ರಾಜ್ಯ ಸರ್ಕಾರವೇ ಪ್ರಾಯೋಜಿಸಿದ ಹತ್ಯೆ ಎಂದು ಡಿವೈಎಫ್‌ಐ ರಾಷ್ಟ್ರೀಯ ಮುಖಂಡರ ನಿಯೋಗ ಆರೋಪಿಸಿದೆ.

ಡಿವೈಎಫ್‌ಐ ರಾಷ್ಟ್ರೀಯ ಘಟಕದ ಅಧ್ಯಕ್ಷ ಮುಹಮ್ಮದ್ ರಿಯಾಝ್‌ ನೇತೃತ್ವದ ನಿಯೋಗ ಶುಕ್ರವಾರ ಗೋಲಿಬಾರ್‌ನಲ್ಲಿ ಮೃತರಾದ ಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಅವರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿತು. ಬಳಿಕ ಘಟನಾ ಸ್ಥಳಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಿತು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ರಿಯಾಝ್‌, ‘ಪೊಲೀಸರು ನಡೆಸಿದ ಗೋಲಿಬಾರ್‌ಗೆ ಅಮಾಯಕರು ಬಲಿಯಾಗಿದ್ದಾರೆ. ಮಂಗಳೂರಿನ ಪೊಲೀಸ್‌ ಕಮಿಷನರ್‌ ಆರ್‌ಎಸ್ಎಸ್‌ ಮತ್ತು ಬಿಜೆಪಿ ಮುಖಂಡರ ಜೊತೆ ಸಖ್ಯ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಅವರು ಸರ್ಕಾರಿ ಪ್ರಾಯೋಜಿತ ಹತ್ಯೆಯ ಏಜೆಂಟರಾಗಿ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ಎಫ್‌ಐಆರ್‌ನಲ್ಲಿ ‘ಅಪರಿಚಿತ ಮುಸ್ಲಿಂ ಯುವಕರು’ ಎಂದು ಉಲ್ಲೇಖಿಸಿರುವುದು ದೇಶದ ಇತಿಹಾಸದಲ್ಲೇ ಮೊದಲು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ನಡೆಸುತ್ತಿರುವ ಕ್ರೂರ ಹತ್ಯೆಗಳನ್ನು ಕರ್ನಾಟಕ ಸರ್ಕಾರವೂ ಮಾದರಿಯಾಗಿ ತೆಗೆದುಕೊಂಡಿದೆ. ಪರಿಹಾರ ವಿತರಣೆಯ ವಿಚಾರದಲ್ಲಿ ಇಲ್ಲಿನ ಮುಖ್ಯಮಂತ್ರಿ ಬಿಜೆಪಿಯ ಮುಖ್ಯಮಂತ್ರಿಯಾಗಿ ನಡೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗೋಲಿಬಾರ್‌ ಕುರಿತು ಸ್ವತಂತ್ರವಾದ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಮೃತರ ಕುಟುಂಬಗಳಿಗೆ ತಲಾ ₹ 25 ಲಕ್ಷಗಳ ಪರಿಹಾರ ನೀಡಬೇಕು. ಪೊಲೀಸ್‌ ಕಮಿಷನರ್‌ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ರಾಷ್ಟ್ರ ಸ್ಥಾಪನೆಗೆ ಯತ್ನ

ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಅದಕ್ಕಾಗಿಯೇ ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ಸಂವಿಧಾನ ವಿರೋಧಿ ಕಾಯ್ದೆಗಳನ್ನು ರೂಪಿಸಿದೆ ಎಂದು ರಿಯಾಝ್‌ ಆರೋಪಿಸಿದರು.

ಡಿವೈಎಫ್‌ಐ ಕೇರಳ ರಾಜ್ಯ ಘಟಕದ ಅಧ್ಯಕ್ಷ ಎ. ಸತೀಶ್, ಕಾರ್ಯದರ್ಶಿ ಎ.ಎ. ರಹೀಂ, ಕೇಂದ್ರ ಸಮಿತಿ ಸದಸ್ಯರಾದ ಎಸ್.ಕೆ. ಸಾಜಿಶ್, ಕೆ.ಯು. ಜ್ಞಾನೇಶ್ ಕುಮಾರ್, ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕಾಸರಗೋಡು ಘಟಕದ ಅಧ್ಯಕ್ಷ ವಿ.ಕೆ. ಸನೋಜ್, ಕಾರ್ಯದರ್ಶಿ ನಿಶಾಂತ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT