ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಬಸ್‌ಗಳಲ್ಲಿ ಯುಪಿಐ ಸೌಲಭ್ಯ; ಜಿಪಿಎಸ್ ಅಳವಡಿಕೆ: ಅಜೀಜ್ ಪರ್ತಿಪಾಡಿ

Published 15 ಜೂನ್ 2024, 14:33 IST
Last Updated 15 ಜೂನ್ 2024, 14:33 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಖಾಸಗಿ ಬಸ್‌ಗಳು ಹಂತಹಂತವಾಗಿ ಡಿಜಿಟಲೀಕರಣಗೊಳ್ಳುತ್ತಿದ್ದು ಸಮಯ ಪಾಲನೆಯನ್ನು ಖಾತರಿಪಡಿಸಲು ಸದ್ಯದಲ್ಲೇ ಜಿಪಿಎಸ್ ಸೌಲಭ್ಯ ಅಳವಡಿಸಲಾಗುವುದು. ಪ್ರಯಾಣಿಕರು ಯುಪಿಐ ಮೂಲಕ ಟಿಕೆಟ್ ಮೊತ್ತ ಪಾವತಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ ತಿಳಿಸಿದರು.

ಚಲೊ ಕಂಪನಿಯ ಸಹಯೋಗದಲ್ಲಿ ಮೂರು ವರ್ಷಗಳಿಂದ ನಗದು ರಹಿತ ಪಾವತಿ ಸೌಲಭ್ಯ ಜಾರಿಯಲ್ಲಿದ್ದು ವಿದ್ಯಾರ್ಥಿಗಳಿಗೆ ಶೇಕಡ 60ರಷ್ಟು ರಿಯಾಯಿತಿ ದರದಲ್ಲಿ ಪ್ರಯಾಣ ಸೌಲಭ್ಯ ಒದಗಿಸಲಾಗುತ್ತಿದೆ. ಸಾರ್ವಜನಿಕರು ಶೇಕಡ 10ರಷ್ಟು ಮಾತ್ರ ಚಲೊ ಕಾರ್ಡ್ ಬಳಸುತ್ತಿದ್ದಾರೆ. ಯುಪಿಐ ಮೂಲಕ ಪಾವತಿ ಮಾಡುವಂತಿದ್ದರೆ ಹೆಚ್ಚು ಮಂದಿ ನಗದು ರಹಿತ ಸೌಲಭ್ಯವನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿದ್ಯಾರ್ಥಿಗಳಿಗೆ ಈಗ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸಾರ್ವಜನಿಕರು ಸಣ್ಣ ಮೊತ್ತವನ್ನು ಭರಿಸಬೇಕಾಗಿದೆ. ಒಮ್ಮೆ ಖರೀರಿಸಿದ ಪಾಸ್‌ 40 ದಿನಗಳ ವರೆಗೆ ಮಾನ್ಯವಾಗಿರುತ್ತದೆ. ರಿಯಾಯಿತಿ ಪಡೆಯಲು ಜುಲೈ ಒಂದರಿಂದ ಪಾಸ್ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಹಂಪನಕಟ್ಟೆಯ ಮಿಲಾಗ್ರಿಸ್ ಕಟ್ಟಡದಲ್ಲಿರುವ ಸಂಘದ ಕಚೇರಿ, ಬಲ್ಮಠ ರಸ್ತೆಯ ಸಿಟಿ ಲೈಟ್ ಕಟ್ಟಡದಲ್ಲಿರುವ ಚಲೊ ಕಚೇರಿ, ಬಲ್ಮಠದ ಮಾಂಡೊವಿ ಮೋಟರ್ಸ್ ಎದುರಿನ ಸಾಗರ್ ಟೂರಿಸ್ಟ್‌, ಸುರತ್ಕಲ್ ಬಸ್ ನಿಲ್ದಾಣ ಸಮೀಪದ ಸಾಯಿ ಮೊಬೈಲ್, ತೊಕ್ಕೊಟ್ಟು ಬಸ್ ನಿಲ್ದಾಣ ಬಳಿಯ ಅನು ಮೊಬೈಲ್‌ ಅಂಗಡಿಗಳಲ್ಲಿ ಪಾಸ್ ಲಭ್ಯ ಇದೆ ಎಂದು ಅವರು ವಿವರಿಸಿದರು.

ಶಿಕ್ಷಣ ಸಂಸ್ಥೆ ನೀಡಿರುವ ಗುರುತಿನ ಚೀಟಿ ಅಥವಾ ಶುಲ್ಕ ಪಾವತಿಯ ರಶೀದಿ ಇದ್ದರೆ ಪಾಸ್ ಪಡೆದುಕೊಳ್ಳಬಹುದು. ಸಂಘದ ವಿದ್ಯಾರ್ಥಿ ಬಸ್ ಕಾರ್ಡ್‌ನಲ್ಲಿ ಬಸ್ ಪಾಸ್ ಮಾಹಿತಿ ಅಪ್‌ಲೋಡ್ ಮಾಡಬೇಕು. ಮಾಹಿತಿಗೆ 7996999977 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಬಸ್ ಚಲಾಯಿಸುವಾಗ ಯಾರಿಗೂ ತೊಂದರೆಯಾಗದಂತೆ ಜಾಗರೂಕರಾಗಿರುವಂತೆಯೂ ಮಳೆಗಾಲದಲ್ಲಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆಯೂ ಚಾಲಕರಿಗೆ ಸೂಚಿಸಲಾಗಿದೆ. ಕರ್ಕಶ ಹಾರ್ನ್ ಬಳಕೆ ಮಾಡದಂತೆಯೂ ಬಸ್‌ ಒಳಗೆ ಹಾಡು ಹಾಕದಂತೆಯೂ ನಿಗದಿತ ಜಾಗದಲ್ಲಿ ಮಾತ್ರ ಬಸ್ ನಿಲ್ಲಿಸುವಂತೆಯೂ ತಿಳಿಸಲಾಗಿದೆ. ನಗರದ ಒಳಗೆ ವಾಹನಗಳ ಸಂಖ್ಯೆ ವಿಪರೀತ ಇರುವುದರಿಂದ ವೇಗನಿಯಂತ್ರಣ ಸಹಜವಾಗಿಯೇ ಆಗುತ್ತದೆ. ಬಾಗಿಲುಗಳನ್ನು ಅಳವಡಿಸಲು ಹೊರರಾಜ್ಯಗಳಿಗೆ ಹೋಗಬೇಕಾಗುತ್ತದೆ. ಮುಂದಿನ ಹಂತಗಳಲ್ಲಿ ಅದನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್‌, ಉಪಾಧ್ಯಕ್ಷ ರಾಮಚಂದ್ರ ನಾಯಕ್‌, ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ, ಚಲೊ ಕಂಪನಿಯ ಪ್ರಸಾದ್ ಮತ್ತು ಅಮೃತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT