ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಗೆಲುವಿಗೆ ಎನ್‌ಆರ್‌ಐಗಳ ಶ್ರಮ: ಸಂಸದ ನಳಿನ್‌ಕುಮಾರ್ ಕಟೀಲ್

Published 13 ಏಪ್ರಿಲ್ 2024, 6:09 IST
Last Updated 13 ಏಪ್ರಿಲ್ 2024, 6:09 IST
ಅಕ್ಷರ ಗಾತ್ರ

ಮಂಗಳೂರು: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಅನೇಕ ಎನ್‌ಆರ್‌ಐಗಳು ಊರಿಗೆ ಬಂದು ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಲು ಬಯಸಿ ಹಲವಾರು ಮತದಾರರು ಪಕ್ಷದ ಕಾರ್ಯಕರ್ತರ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಕಾರ್ಯಕರ್ತರಲ್ಲದ ಕೇವಲ ಮತದಾರರಾಗಿರುವ ಹಲವಾರು ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು ಬಿಜೆಪಿಯ ಗೆಲುವಿಗಾಗಿ ನಿರಂತರ ದುಡಿಯುತ್ತಿದ್ದಾರೆ. 10 ವರ್ಷ ಆಡಳಿತ ನಡೆಸಿದ ನಂತರವೂ ಮೋದಿ ಅವರು ಜಗತ್ತಿನ ಜನಮನ್ನಣೆ ಪಡೆದ ಜನನಾಯಕ. ಹೀಗಾಗಿ, ಈ ಬಾರಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಪ್ರಧಾನಿಯಾಗುವುದರಲ್ಲಿ ಸಂದೇಹವಿಲ್ಲ’ ಎಂದರು. 

ಭ್ರಷ್ಟಾಚಾರದ ಆರೋಪವಿಲ್ಲದೆ ಸ್ವಚ್ಛ, ಪ್ರಾಮಾಣಿಕ ಆಡಳಿತ ನೀಡಿರುವುದು, ಭಯೋತ್ಪಾದನೆ ನಿಗ್ರಹಕ್ಕೆ ಕೈಗೊಂಡ ಕ್ರಮಗಳು, ವೈರಿ ರಾಷ್ಟ್ರಗಳಿಗೆ ಕೊಟ್ಟಿರುವ ಎಚ್ಚರಿಕೆಗಳು, ಕಾಶ್ಮೀರ ಮತ್ತು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಸನ್ನಿವೇಶಗಳನ್ನು ಚಾಣಾಕ್ಷತನದಿಂದ ನಿರ್ವಹಿಸಿದ ರೀತಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಕೂಟ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಇದೇ ಮೊದಲ ಬಾರಿಗೆ ಮೋದಿ ಏ.14ರಂದು ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಜನರು ಇರುವಲ್ಲಿಗೆ ಮೋದಿ ಸ್ವತಃ ಬರುತ್ತಿದ್ದಾರೆ. ಸಂಜೆ 6 ಗಂಟೆಗೆ ನಾರಾಯಣಗುರು ವೃತ್ತದಿಂದ ಆರಂಭಿಸಿ ನವಭಾರತ ಸರ್ಕಲ್‌ವರೆಗೆ ಪ್ರಧಾನಿ ಮೋದಿ ಅವರ ರೋಡ್‌ ಶೋ ನಡೆಯಲಿದೆ. ಅವರನ್ನು ಸ್ವಾಗತಿಸಲು ಪಕ್ಷ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ನಳಿನ್ ವಿವರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಸುದರ್ಶನ್ ಮೂಡುಬಿದಿರೆ, ನಿತಿನ್‌ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ಕಿಶೋರ್ ಬೊಟ್ಯಾಡಿ, ಯತೀಶ್ ಅರ್ವಾರ, ಕಸ್ತೂರಿ ಪಂಜ, ಮೋನಪ್ಪ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT