ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಚಿಂತನೆಯಡಿ ದೇಶ ಕಟ್ಟೋಣ: ಶಾಸಕ ಹರೀಶ್‌ ಪೂಂಜ

ಬೆಳ್ತಂಗಡಿಯಲ್ಲಿ ಬಿಜೆಪಿ ಜಿಲ್ಲಾ ಎಸ್.ಸಿ. ಸಮಾವೇಶ
Last Updated 21 ಮಾರ್ಚ್ 2023, 13:09 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಸರ್ಕಾರಗಳ ಅನೇಕ ಯೋಜನೆಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯವನ್ನು ಬಿಜೆಪಿ ನಿಷ್ಠೆಯಿಂದ ಮಾಡುತ್ತಾ ಬಂದಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ನಾಲ್ಕೂವರೆ ವರ್ಷದಲ್ಲಿ ₹3,500 ಕೋಟಿ ಅನುದಾನ ತಂದು ಹಿಂದುಳಿದರ ಏಳಿಗೆಯ ಜತೆಗೆ ಜಾತಿ, ಪಕ್ಷ ರಹಿತ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇವೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಸಿ. ಮೋರ್ಚಾದ ವತಿಯಿಂದ ಗುರುವಾಯನಕೆರೆಯ ಕಿನ್ಯಮ್ಮ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ಡಾ.ಬಿ.ಅಂಬೇಡ್ಕರ್ ಹೆಸರಿನಡಿ ಕಾಂಗ್ರೆಸ್ ಪಕ್ಷ ಜಾತಿ ರಾಜಕೀಯ ನಡೆಸುತ್ತಾ ಬಂದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಅಂಬೇಡ್ಕರ್ ಅವರ ಜೀವನ ಕಾಲಘಟ್ಟವನ್ನು ಪ್ರತಿ ಹಂತದಲ್ಲೂ ಗುರುತಿಸುವ ನೈಜಕಾರ್ಯ ಇಂದು ಆಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ದೇಶಕ್ಕೆ ಮಾದರಿಯಾಗಬಲ್ಲ ₹7 ಕೋಟಿ ಅನುದಾನದಡಿ ಮಾದರಿ ಅಂಬೇಡ್ಕರ್ ಭವನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಸಂಚಾಲಕ ಮಹೇಂದ್ರ ಕೊತ್ವಾಲ್ ಮಾತನಾಡಿ, ‘ಸಮಾವೇಶದ ಉದ್ದೇಶ ಕಟ್ಟಕಡೆಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ. ಈ ದೇಶದಲ್ಲಿ ಸೈನ್ಯ, ಹಣ, ರೈತ ಬಲದೊಂದಿಗೆ ಜ್ಞಾನದ ಬಲ ನೀಡಿದ ಡಾ.ಬಿ.ಅಂಬೇಡ್ಕರ್ ಅವರ ಆಶಯದಂತೆ ಸಮುದಾಯದ ನೈಜ ಅಭಿವೃದ್ಧಿ ಬಿಜೆಪಿಯಿಂದಾಗಿದೆ’ ಎಂದು ಹೇಳಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ‘ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ. ಅವರು 138 ಕೋಟಿ ಭಾರತೀಯರ ನಾಯಕ. ಕಾಂಗ್ರೆಸ್ ನಲ್ಲಿ ಟಿಪ್ಪು, ಬ್ರಿಟಿಷರು ಸೇರಿದಂತೆ ಬೇರೆ ಬೇರೆ ಆಕ್ರಮಿತರ ವಂಶಾವಳಿಯಿದೆ. ಆದರೆ, ಬಿಜೆಪಿಯಲ್ಲಿರುವುದು ನೈಜ ಭಾರತೀಯರು ಮಾತ್ರ. ನಾವೆಲ್ಲ ಸ್ವಾಭಿಮಾನ ಭಾರತ ಕಟ್ಟಲು ಬಿಜೆಪಿಯನ್ನು ಬೆಂಬಲಿಸೋಣ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮಾತನಾಡಿ, ‘ಈ ದೇಶದಲ್ಲಿ ಜಾತಿಯಿಂದ ಯಾರೂ ಗುರುತಿಸಿಕೊಂಡಿಲ್ಲ. ಬದಲಾಗಿ ತನ್ನ ಸಾಧನೆ, ಶ್ರೇಷ್ಠತೆ, ನಡತೆಯಿಂದ ಗುರುತಿಸಿಕೊಂಡಿದ್ದಾನೆ. ಈ ದೇಶದ ಪರಂಪರೆ ಉಳಿಸಿ ಹಿಂದೂ ಸಮಾಜ ಒಂದೇ ವೇದಿಕೆಯಲ್ಲಿ ಬರುವ ಕೆಲಸ ಬಿಜೆಪಿಯಿಂದಾಗಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬೆಳ್ತಂಗಡಿ ಮಂಡಲ ಚುನವಣಾ ಪ್ರಭಾರಿ ಆಶಾ ತಿಮ್ಮಪ್ಪ ಗೌಡ, ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಭಾರಿ ಮಂಗಳಾ ಆಚಾರ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಸಮಾವೇಶದ ಜಿಲ್ಲಾ ಸಂಚಾಲಕ ಸಂದೇಶ್ ಶೆಟ್ಟಿ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಪ್ರಮುಖರಾದ ದಿನೇಶ್ ಅಮ್ಟೂರು, ಆನಂದ ಪಾಂಗಳ, ಕೇಶವ ದೈಪಾಲ, ಆನಂದ ಕೆ. ಇದ್ದರು.

ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ವಿನಯನೇತ್ರ ದಡ್ಡಲ್ ಕಾಡ್ ಪ್ರಾಸ್ತಾವಿದರು. ಎಸ್.ಸಿ. ಮೋರ್ಚಾ ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ನಿರೂಪಿಸಿದರು. ಸದಾಶಿವ ಕರಂಬಾರು ವಂದಿಸಿದರು.

ನೀಲನಕಾಶೆ ಅನಾವರಣ

ಬೆಳ್ತಂಗಡಿ ತಾಲ್ಲೂಕು ಕ್ರೀಡಾಂಗಣದಲ್ಲಿ 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನದ ನೀಲನಕಾಶೆಯನ್ನು ಶಾಸಕ ಹರೀಶ್ ಪೂಂಜ ಅನಾವರಣ ಮಾಡಿದರು. ಇದೇ ವೇಳೆ ಕಣಿಯೂರು ಸೀತಾರಾಮ ಮಡಿವಾಳ, ಕಾಂತಪ್ಪ ನಾಯ್ಕ, ರಂಜಿತ್ ಬಾಂಗೇರು, ನಿತಿನ್ ಕಣಿಯೂರು, ಕೃಷ್ಣಪ್ಪ ಮಡಿವಾಳ, ರುಕ್ಮಯ ಗೌಡ ಅಡೀಲು ಅವರು ಬಿಜೆಪಿ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT