ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ನನಸಾಗಿಲ್ಲ ‘ಸೌಹಾರ್ದ ಸೇತುವೆ’ ಕನಸು

ಯೋಜನೆ ಮಂಜೂರಾಗಿ ಕಳೆದಿದೆ 8 ವರ್ಷ, ಪುನರಾರಂಭದ ಬಳಿಕವೂ ಕುಂಟುತ್ತಾ ಸಾಗಿದೆ ಕಾಮಗಾರಿ
Published 30 ಏಪ್ರಿಲ್ 2024, 6:22 IST
Last Updated 30 ಏಪ್ರಿಲ್ 2024, 6:22 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಕಡೇಶಿವಾಲಯದಲ್ಲಿ ನೇತ್ರಾವತಿ ನದಿ ದಂಡೆಯಲ್ಲಿ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ನದಿಯ ಇನ್ನೊಂದು ದಂಡೆಯ ಅಜಿಲಮೊಗರು ಗ್ರಾಮದಲ್ಲಿ ಸಯ್ಯದ್‌ ಬಾಬಾ ಫಕ್ರುದ್ದೀನ್‌ ಜುಮ್ಮಾ ಮಸೀದಿ ಇದೆ. ಈ ಎರಡು ಧಾರ್ಮಿಕ ಕೇಂದ್ರಗಳನ್ನು ಬೆಸೆಯಲು ಸೇತುವೆ ನಿರ್ಮಿಸುವುದು ಗ್ರಾಮಸ್ಥರ ಕನಸು. 8 ವರ್ಷಗಳ ಹಿಂದೆ ಆರಂಭವಾದ ‘ಸೌಹಾರ್ದ ಸೇತುವೆ’ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

‘ಸೌಹಾರ್ದ ಸೇತು’ವಿನ ಅಪೂರ್ಣ ಕಾಮಗಾರಿಯು, ಜಿಲ್ಲೆಯಲ್ಲಿ ಧರ್ಮ–ಧರ್ಮಗಳ ನಡುವಿನ ಕದಡಿದ ಮನಸುಗಳನ್ನು ಬೆಸೆಯುವ ಸಹೃದಯರ ಪ್ರಯತ್ನಗಳ ಪ್ರತಿಬಿಂಬದಂತೆ ಕಾಣಿಸುತ್ತದೆ.

‘ಬಿ.ರಮಾನಾಥ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದಕ್ಕೆ ಅನುದಾನ ಮಂಜೂರು ಮಾಡಿತ್ತು.  ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಸ್ಥಳೀಯರ ಒತ್ತಾಸೆಯಂತೆ ಎಂಟು ವರ್ಷದ ಹಿಂದೆಯೇ ನದಿಯ ಎರಡು ದಡಗಳನ್ನು ಬೆಸೆಯುವ ಕಾಮಗಾರಿಯೇನೋ ಆರಂಭವಾಗಿದೆ. ಆದರೆ ಅದು ಪೂರ್ಣಗೊಳ್ಳದಿರುವುದು ಬೇಸರದ ವಿಷಯ’ ಎನ್ನುತ್ತಾರೆ ಅಜಿಲ ಮೊಗರು ಗ್ರಾಮದ ಆದಂ.

‘ಪ್ರತಿ ವರ್ಷವೂ ಗುತ್ತಿಗೆದಾರರು ಬಂದು ನೇತ್ರಾವತಿ ನದಿಗೆ ಒಂದಿಷ್ಟು ಮಣ್ಣು ತುಂಬಿಸಿ ಕಾಮಗಾರಿ ಆರಂಭಿಸುತ್ತಾರೆ. ಒಂದು ಕಾಮಗಾರಿ ಪೂರ್ಣಗೊಳಿಸಲು ಗಡುವು ಎಂಬುದಿಲ್ಲವೇ? ಸೇತುವೆ ಪೂರ್ಣವಾಗಲು ಇಷ್ಟು ವರ್ಷಗಳು ಬೇಕೇ’ ಎಂಬುದು ಅವರ ಪ್ರಶ್ನೆ.

ಈ ಸಲ ಗ್ರಾಮಸ್ಥರು ಸರ್ಕಾರದ ಮೇಲೆ ಒತ್ತಡ ಹಾಕಿದ ಕಾರಣ ಕಾಮಗಾರಿ ಪುನರಾರಂಭವಾಗಿದೆ. ಇದುವರೆಗೆ 11 ಪಿಲ್ಲರ್‌ಗಳೂ ನಿರ್ಮಾಣವಾಗಿವೆ. ಐದು ಪಿಲ್ಲರ್‌ಗಳು ಬಹುತೇಕ ಪೂರ್ಣಗೊಂಡಿವೆ. ಕೆಲಸ ಮುಂದುವರಿದಿದೆ.

‘ನಾವು ಈ ಸಲ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಯಾಗಿ ಸೇತುವೆ ಅಪೂರ್ಣಗೊಂಡಿರುವ ವಿಚಾರವನ್ನು ಗಮನಕ್ಕೆ ತಂದಿದ್ದೇವೆ. ಈ ಸೇತುವೆಗೆ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದನ್ನೂ ನೆನಪಿಸಿದ್ದೇವೆ. ಜೂನ್‌ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಆ ಬಳಿಕ ಕಾಮಗಾರಿ ಪುನರಾರಂಭಗೊಂಡಿದೆ. ಈ ಗಡುವಿನ ಒಳಗಾದರೂ ಸೇತುವೆ ಪೂರ್ಣವಾಗುತ್ತದೋ ಕಾದು ನೋಡಬೇಕು’ ಎಂದು ಆದಂ ತಿಳಿಸಿದರು.

‘ಈ ಸೇತುವೆ ಪೂರ್ಣವಾದರೆ ಅಜಿಲಮೊಗರು, ನಾವೂರು, ಮಣಿನಾಲ್ಕೂರು, ಸರಪಾಡಿ, ಉಳಿ, ಬಡಗ ಕಜೆಕಾರು, ತೆಂಕಕಜೆಕಾರು, ತೆಕ್ಕಾರು ಗ್ರಾಮದವರು ಮಾಣಿ, ‍ಪುತ್ತೂರು, ಸುಳ್ಯ, ವಿಟ್ಲ, ಕಡೇಶಿವಾಲಯ ಕಡೆಗೆ ಪ್ರಯಾಣಿಸಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ನಾವೂರ ಗ್ರಾಮದ ನಿವಾಸಿ ವಿಜಯ್‌.

ಆದಮ್
ಆದಮ್
ಮಳೆಗಾಲದ ಒಳಗಾದರೂ ಈ ಸೌಹಾರ್ದ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕು. ಕಡೆಶಿವಾಲಯ ಮತ್ತು ಅಜಿಲಮೊಗರು ಗ್ರಾಮಗಳ ನಡುವೆ ನೇರ ಸಂಪರ್ಕ ಸಾಧ್ಯವಾಗಬೇಕು
ಆದಂ ಅಜಿಲಮೊಗರು ಗ್ರಾಮದ ನಿವಾಸಿ
ವಿಜಯ್ 
ವಿಜಯ್ 
ಈ ಸೇತುವೆಯು ನದಿಯ ಎರಡೂ ಕಡೆಯ ಗ್ರಾಮಗಳ ಜನರ ಅನೇಕ ಬವಣೆಗಳನ್ನು ನಿವಾರಿಸಲಿದೆ. ಈ ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಬೇಕು.
ವಿಜಯ್‌ ನಾವೂರ ಗ್ರಾಮದ ನಿವಾಸಿ
ಅಂಕಿ ಅಂಶ
‘ಮಳೆಗಾಲದಲ್ಲೂ ಬಳಕೆಗೆ ಸಿಗದು ಸೇತುವೆ’
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಉಸ್ತುವಾರಿಯಲ್ಲಿ ನಡೆಯುತ್ತಿರುವ ಈ ಸೇತುವೆ ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈನ ಎಸ್‌ಪಿಎಲ್ ಕಂಪನಿ ವಹಿಸಿಕೊಂಡಿದೆ. 2024ರ ಜುಲೈ ಒಳಗಡೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕೆಆರ್‌ಡಿಸಿಎಲ್ ಸೂಚನೆ ನೀಡಿದೆ. ಈ ಸೇತುವೆಯ 11 ಪಿಲ್ಲರ್‌ಗಳಲ್ಲಿ ಐದು ಪಿಲ್ಲರ್‌ಗಳು ಮಾತ್ರ ಪೂರ್ಣಗೊಂಡಿವೆ. ಬೀಮ್‌ಗಳ ಜೋಡಣೆ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಕೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿವೆ. ಕಾಮಗಾರಿ ನಡೆಯುತ್ತಿರುವ ವೇಗವನ್ನು ನೋಡಿದರೆ ಈ ಗಡುವಿನ ಒಳಗೂ ಈ ಸೇತುವೆ ಪೂರ್ಣಗೊಳ್ಳುವುದು ಅನುಮಾನ. ಮುಂಬರುವ ಮಳೆಗಾಲಕ್ಕೂ ಈ ಸೇತುವೆಯನ್ನು ಬಳಸುವ ಭಾಗ್ಯ ನಮಗೆ ಸಿಗುವುದು ಕಷ್ಟ’ ಎನ್ನುತ್ತಾರೆ ಗ್ರಾಮಸ್ಥರು. ಗುತ್ತಿಗೆದಾರರು 2021ರಲ್ಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೊರೊನಾ ಸಂದರ್ಭದಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಕಾಮಗಾರಿ  ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT