ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ದುಬಾರಿ ಮಾವಿಗೆ ಭಾರಿ ಬೇಡಿಕೆ

Published 10 ಮೇ 2024, 5:22 IST
Last Updated 10 ಮೇ 2024, 5:22 IST
ಅಕ್ಷರ ಗಾತ್ರ

ಮಂಗಳೂರು: ಬಹುತೇಕ ದುಪ್ಪಟ್ಟು ರೇಟು. ಆದರೂ ಮಾವು ಪ್ರಿಯರು ಅದನ್ನು ಲೆಕ್ಕಿಸದೆ ಖರೀದಿ ಮಾಡಿದರು. ಹೀಗಾಗಿ ಉದ್ಘಾಟನೆಗೂ ಮೊದಲೇ ಮಾವು ಮೇಳದಲ್ಲಿ ಖರೀದಿ ಜೋರಾಗಿ ನಡೆಯಿತು. ಬರದಿಂದ ಕಂಗೆಟ್ಟಿದ್ದ ರೈತರು ಕರಾವಳಿಗರ ಉತ್ಸಾಹಕ್ಕೆ ಮನಸೋತರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ನಗರದ ಕದ್ರಿ ಉದ್ಯಾನದಲ್ಲಿ ಆಯೋಜಿಸಿರುವ ಹಲಸು ಮತ್ತು ಮಾವು ಮೇಳದಲ್ಲಿ ಮಾವಿನ ಹಣ್ಣುಗಳೇ ‘ರಾಜ’ನಾಗಿ ಮೆರೆಯುತ್ತಿವೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಮಾಗಡಿ ಮುಂತಾದ ಕಡೆಗಳಲ್ಲಿ ಮಾವು ಬೆಳೆಯುವ ಕುಟಂಬಗಳು ಇಲ್ಲಿಗೆ ಬಂದಿದ್ದು ಭರ್ಜರಿ ವ್ಯಾಪಾರಕ್ಕೆ ಸಂತಸಗೊಂಡಿದ್ದಾರೆ.

ಮಲ್ಗೋವಾ, ಬೈಗಂಪಲ್ಲಿ, ರಸಪುರಿ, ತೋತಾಪುರಿ ಮುಂತಾದ ಬಗೆಬಗೆಯ ತಳಿಯ ಹಣ್ಣುಗಳು ಮೇಳದಲ್ಲಿ ಇವೆ. ಒಟ್ಟು 20 ಮಳಿಗೆಗಳ ಪೈಕಿ ಒಂದೆರಡರಲ್ಲಿ ಮಾತ್ರ ಹಲಸು ಇದೆ. 

ಬಿಸಿಲಿನ ಹೊಡೆತದಿಂದಾಗಿ ಈ ಬಾರಿ ಫಸಲು ಶೇಕಡ 50ರಿಂದ 70ರಷ್ಟು ಕೈಕೊಟ್ಟಿದೆ ಎಂದು ಹೇಳುವ ಬೆಳೆಗಾರರು ಈ ಕಾರಣದಿಂದ ಬೆಲೆಯೂ ಹೆಚ್ಚಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ. ಕೆಲವು ತಳಿಯ ಹಣ್ಣುಗಳಿಗೆ ದುಪ್ಪಟ್ಟು ದರ ನಿಗದಿ ಮಾಡುವುದು ಅನಿವಾರ್ಯವಾಗಿದೆ. ಗ್ರಾಹಕರಿಂದ ಹೆಚ್ಚು ದರ ಪಡೆಯಲು ಬೇಸರವಾಗುತ್ತದೆ. ಆದರೇನು ಮಾಡುವುದು ಈ ಬಾರಿ ಅಂಥ ಪರಿಸ್ಥಿತಿ ಬಂದೊದಗಿದೆ ಎನ್ನುತ್ತಾರೆ ಅವರು.

‘ಮಾವು ಚೆನ್ನಾಗಿ ಬೆಳೆಯುತ್ತಿದ್ದೆವು. ಇದೇ ಮೊದಲ ಬಾರಿ ಈ ವರ್ಷ ಇಂಥ ಹೊಡೆತ ಬಿದ್ದಿದೆ’ ಎಂದು ಹೇಳಿದ ಚನ್ನಪಟ್ಟಣದ ಲವಕುಮಾರ್ ‘ಅಲ್ಫೊನ್ಸೊ ಹಣ್ಣಿಗೆ ಎಲ್ಲ ಕಡೆಯಂತೆ ಇಲ್ಲಿಯೂ ಉತ್ತಮ ಬೇಡಿಕೆ ಇದೆ. ಆ ತಳಿಯ ಹಣ್ಣು ಎಲ್ಲರಿಗೂ ಪರಿಚಿತ. ಆದ್ದರಿಂದ ಅದನ್ನೇ ಮೊದಲು ಕೇಳುತ್ತಾರೆ’ ಎಂದರು.

ನಾವು ಕುಟುಂಬ ಸಮೇತರಾಗಿ ಮಾವು ಬೆಳೆಯುತ್ತೇವೆ. ನಮ್ಮ ಕುಟುಂಬದ ಮೂರು ಎಕರೆ ಮತ್ತು ಮಾವನ ನಾಲ್ಕು ಎಕರೆ ಜೊತೆಯಾಗಿಯೇ ಇದೆ. ಮಾವಿನ ಋತು ಮುಗಿದ ನಂತರ ರಾಗಿ, ರೇಷ್ಮೆ ಇತ್ಯಾದಿಗಳನ್ನು ಬೆಳೆಯುತ್ತೇವೆ. ಕೆಲವೊಮ್ಮೆ ಹುರುಳಿ ಚೆಲ್ಲುತ್ತೇವೆ ಎಂದು ಹೇಳಿದವರು ರಾಮನಗರದ ರವಿಕುಮಾರ್.

ಮಾವು ಮೇಳ ನೋಡಲೆಂದೇ ಚನ್ನಪಟ್ಟಣದಿಂದ ಬಂದಿದ್ದ ಕೃಷಿಕ, ನಿವೃತ್ತ ಶಿಕ್ಷಕ ಗುರುಮಾದಪ್ಪ ‘ಇಲ್ಲಿ ಉತ್ತಮ ಸ್ಪಂದನೆ ಇದೆ. ಗ್ರಾಹಕರ ಉತ್ಸಾಹ ಕಂಡು ಖುಷಿಯಾಗಿದೆ. ಸರ್ಕಾರಗಳು ಬೆಳೆ ವಿಮೆ ಸೇರಿದಂತೆ ಯಾವುದನ್ನೂ ಸಮರ್ಪಕವಾಗಿ ಕೊಡುವುದಿಲ್ಲ. ಇಂಥ ಸ್ಥಿತಿಯಲ್ಲಿ ಗ್ರಾಹಕರೇ ಬೆಳೆಗಾರರ ಕೈ ಹಿಡಿಯಬೇಕು’ ಎಂದರು.

ಮಾಗಡಿಯಿಂದ ಬಂದಿರುವ ಶಿವಮ್ಮ, ದಾನಮ್ಮ, ಪುಟ್ಟಮಲ್ಲಮ್ಮ ಮುಂತಾದವರು ಒಂದೇ ಮಳಿಗೆಯಲ್ಲಿ ತರಹೇವಾರಿ ಹಣ್ಣುಗಳನ್ನು ಇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ‘ಬೆಳೆ ಕಡಿಮೆಯಾಗಿದೆ. ಹೀಗಾಗಿ ದುಪ್ಪಟ್ಟು ಬೆಲೆಗೆ ಹಣ್ಣು ಮಾರಬೇಕಾಗಿದೆ’ ಎಂದು ಅವರು ಹೇಳಿದರು.

ಇದೇ 13ರ ವರೆಗೆ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9ರ ವರೆಗೆ  ಮೇಳ ನಡೆಯಲಿದೆ.

ದರ ನಿಗದಿಗೆ ಸಮಿತಿ: ಸಿಇಒ

ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ, ದರ ನಿಗದಿಗೆ ಸಮಿತಿಯೊಂದನ್ನು ರಚಿಸಿದ್ದು ಅವರು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ದರ ನಿಗದಿ ಮಾಡಿದ್ದಾರೆ. ಎಲ್ಲ ಮಳಿಗೆಗಳಲ್ಲಿ ಡಿಜಿಟಲ್ ಪೇಮೆಂಟ್‌ಗೆ ವ್ಯವಸ್ಥೆ ಮಾಡಿದ್ದು ಹಣ್ಣಿನ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಬೇರೆ ಬೇರೆ ಕಾರಣಗಳಿಂದ ಕೇವಲ 20 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್‌.ಆರ್‌.ನಾಯಕ್‌, ಸಹಾಯಕ ನಿರ್ದೇಶಕರಾದ ಪ್ರವೀಣ್‌, ಪ್ರದೀಪ್ ಡಿಸೋಜ, ಕದ್ರಿ ಉದ್ಯಾನ ಅಭಿವೃದ್ಧಿ ಸಮಿತಿಯ ಸದಸ್ಯ ಬಿ.ಜೆ.ಗಾಂಭೀರ್‌ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT