ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಮನೆ: ಶೇ 100 ಸಾಧನೆ ಅಗತ್ಯ: ಸಚಿವ ಎಸ್. ಅಂಗಾರ ಸೂಚನೆ

ಮೀನುಗಾರಿಕಾ ಸಚಿವ ಎಸ್. ಅಂಗಾರ ಸೂಚನೆ
Last Updated 6 ಸೆಪ್ಟೆಂಬರ್ 2021, 17:07 IST
ಅಕ್ಷರ ಗಾತ್ರ

ಮಂಗಳೂರು: ‘ಅಮೃತ ಗ್ರಾಮ ಯೋಜನೆ ಅನುಷ್ಠಾನಗೊಳ್ಳುವ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ವಸತಿ ರಹಿತರ ಅರ್ಜಿಗಳನ್ನು ಪರಿಶೀಲಿಸಿ, ವಸತಿ ಕಲ್ಪಿಸಬೇಕು. ಈ ಹಳ್ಳಿಗಳಲ್ಲಿ ವಸತಿಗೆ ಸಂಬಂಧಿಸಿದ ಯಾವುದೇ ದೂರುಗಳು ಭವಿಷ್ಯದಲ್ಲಿ ಬರಬಾರದು’ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಮೃತ ಗ್ರಾಮ ಪಂಚಾಯಿತಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಗ್ರಾಮ ಪಂಚಾಯಿತಿಗಳಲ್ಲಿ ‘ಅಮೃತ ಗ್ರಾಮ’ ಯೋಜನೆ ಅನುಷ್ಠಾನಗೊಳ್ಳಲಿದೆ. ಯೋಜನೆ ಅನುಷ್ಠಾನಗೊಂಡ ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಯೋಜನೆಗೆ ಸಂಬಂಧಿಸಿ ಮತ್ತೆ ದೂರುಗಳು ಬಂದರೆ, ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಮಾಹಿತಿ ನೀಡಿ, ‘ಬೀದಿದೀಪ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು, ಶೇ 100ರಷ್ಟು ಘನತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ತ್ಯಾಜ್ಯ ನೀರಿನ ವೈಜ್ಞಾನಿಕ ನಿರ್ವಹಣೆ, ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ ಉದ್ಯಾನ ನಿರ್ಮಾಣ, ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಡಿಜಿಟಲೀಕರಣ, ಶಾಲೆ, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ನಿರ್ಮಾಣ, ಕೆರೆ, ಕಲ್ಯಾಣಿಗಳ ಪುನಶ್ಚೇತನ ಈ ಯೋಜನೆಯಲ್ಲಿ ಒಳಗೊಂಡಿದೆ’ ಎಂದರು.

15ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ್ ಮಿಷನ್, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ ಇಲಾಖೆ ಹೀಗೆ ವಿವಿಧ ಯೋಜನೆಗಳ ಅನುದಾನ ಬಳಸಿಕೊಂಡು ಯೋಜನೆ ಕಾರ್ಯಗತಗೊಳಿಸಲಾಗುತ್ತದೆ. ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಗ್ರಾಮ ಪಂಚಾಯಿತಿಗೆ ₹ 25 ಲಕ್ಷ ಅನುದಾನ ಸರ್ಕಾರದಿಂದ ದೊರೆಯುತ್ತದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಒಳಗೊಂಡ ತಂಡವು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದೆ ಎಂದು ಹೇಳಿದರು. ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಇದ್ದರು.

‘ಅಮೃತ ಗ್ರಾಮ’ ಯೋಜನೆಗೆ ಆಯ್ಕೆಯಾದ ಗ್ರಾ.ಪಂ.ಗಳು

ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು, ಇರ್ವತ್ತೂರು, ಪಿಲಾತಬೆಟ್ಟು, ಕಡೇಶ್ವಾಲ್ಯ, ಬಾಳೆಪುಣಿ, ಇಡ್ಕಿದು, ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರು, ಕೊಕ್ಕಡ, ಧರ್ಮಸ್ಥಳ, ಉಜಿರೆ, ಹೊಸಂಗಡಿ, ಅಳದಂಗಡಿ, ಕಡಬ ತಾಲ್ಲೂಕಿನ ಸವಣೂರು, ಅಲಂಕಾರು, ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ, ಆರ್ಯಾಪು, ಕಬಕ, ಸುಳ್ಯ ತಾಲ್ಲೂಕಿನ ಅರಂತೋಡು, ಮಂಡೆಕೋಲು, ಮರ್ಕಂಜ, ಮೂಡುಬಿದಿರೆ ತಾಲ್ಲೂಕಿನ ಬೆಳುವಾಯಿ, ತೆಂಕಮಿಜಾರು, ಮಂಗಳೂರು ತಾಲ್ಲೂಕಿನ ಬಡಗ ಎಡಪದವು, ಗಂಜಿಮಠ, ಮುನ್ನೂರು, ಹಳೆಯಂಗಡಿ ಹಾಗೂ ಪೆರ್ಮುದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT