ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ಬೀಸಮುದ್ರದಲ್ಲಿ ಸಿಲುಕಿದ್ದ 15 ಸಿರಿಯಾ ಪ್ರಜೆಗಳ ರಕ್ಷಣೆ

ಕರಾವಳಿ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆ
Last Updated 21 ಜೂನ್ 2022, 16:04 IST
ಅಕ್ಷರ ಗಾತ್ರ

ಮಂಗಳೂರು: ಅರಬ್ಬೀಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಿರಿಯಾ ದೇಶದ 15 ನಾವೀಕರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯು (ಐಸಿಜಿ) ಮಂಗಳವಾರ ರಕ್ಷಣೆ ಮಾಡಿದೆ.

ಎಂ.ವಿ.ಪ್ರಿನ್ಸಸ್‌ ಮಿರಾಲ್‌ ಎಂಬ ವಿದೇಶಿ ಹಡಗು 8 ಸಾವಿರ ಟನ್‌ ಉಕ್ಕಿನ ಕಾಯಿಲ್‌ಗಳನ್ನು ಚೀನಾದ ಟಿಯಾಂಜಿನ್‌ನಿಂದ ಲೆಬನಾನ್‌ಗೆ ಸಾಗಿಸುತ್ತಿತ್ತು. ಸಿರಿಯಾ ದೇಶದ 15 ನಾವೀಕರು ಅದರಲ್ಲಿದ್ದರು. ಪ್ರಯಾಣದ ವೇಳೆ ಹಡಗಿನ ಒಳಭಾಗದಲ್ಲಿ ಸಣ್ಣ ರಂಧ್ರದ ಮೂಲಕ ನೀರು ಒಳಗೆ ನುಗ್ಗಿತ್ತು. ಅದನ್ನು ದುರಸ್ತಿ ಪಡಿಸುವ ಸಲುವಾಗಿ ಈ ಹಡಗನ್ನು ನವಮಂಗಳೂರು ಬಂದರಿ ತರಲು ಅನುಮತಿ ನೀಡುವಂತೆ ಕ್ಯಾಪ್ಟನ್‌ ಈ ಮೇಲ್‌ ಮೂಲಕ ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಕೋರಿದ್ದರು.

ಪ್ರತೀಕೂಲ ಹವಾಮಾನದಿಂದಾಗಿ ಅರಬ್ಬೀಸಮುದ್ರದಲ್ಲಿ ಜಿಲ್ಲೆಯ ಕರಾವಳಿ ತೀರದಿಂದ 5.2 ಮೈಲಿ ದೂರದಲ್ಲಿ ವಿದೇಶಿ ಹಡಗು ಲಂಗರು ಹಾಕಿತ್ತು. ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಪ್ರತೀಕೂಲ ಹವಾಮಾನವನ್ನು ಲೆಕ್ಕಿಸದೇ ವಿಕ್ರಮ್‌ ಹಾಗೂ ಅಮರ್ಥ್ಯ ಹಡಗುಗಳಲ್ಲಿ ಸ್ಥಳಕ್ಕೆ ಧಾವಿಸಿ, ಸಮುದ್ರದಲ್ಲಿ ಸಿಲುಕಿದ್ದ ಸಿರಿಯಾ ಪ್ರಜೆಗಳನ್ನು ದಡಕ್ಕೆ ಕರೆತಂದರು.

ಹಿಂದೂ ಮಹಾಸಾಗರ ಪ್ರದೇಶದ ವ್ಯಾಪ್ತಿಯಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೋಡೆಲ್‌ ಏಜೆನ್ಸಿ ಆಗಿರುವ ಭಾರತೀಯ ಕರಾವಳಿ ರಕ್ಷಣಾ ಪಡೆಯ ರಕ್ಷಣಾ ಸಾಮರ್ಥ್ಯವನ್ನು ಈ ಯಶಸ್ವಿ ಕಾರ್ಯಾಚರಣೆಯು ಮತ್ತೆ ಸಾಬೀತು ಮಾಡಿದೆ. ‘ನಾವು ರಕ್ಷಿಸುತ್ತೇವೆ’ ಎಂಬ ಧ್ಯೇಯಕ್ಕೆ ಕರಾವಳಿ ರಕ್ಷಣಾ ಪಡೆಯು ಬದ್ಧವಾಗಿರುವುದನ್ನು ಎತ್ತಿ ತೋರಿಸಿದೆ ಎಂದು ಐಸಿಜಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT