ಶುಕ್ರವಾರ, ಜುಲೈ 1, 2022
24 °C
₹ 11 ಲಕ್ಷ ನಗದು ಒಳಗೊಂಡ ಪ್ರಶಸ್ತಿ

ಎಸ್.ಆರ್. ರಂಗಮೂರ್ತಿ ಅವರಿಗೆ ‌‘ಸಹಕಾರಿ ಬಂಧು ಪ್ರಶಸ್ತಿ’ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಟ್ಲ: ಇಫ್ಕೊ ಸಂಸ್ಥೆಯ ವತಿಯಿಂದ ಹಿರಿಯ ಸಹಕಾರಿಗಳಿಗೆ ನೀಡುವ ‘ಸಹಕಾರಿ ಬಂಧು ರಾಷ್ಟ್ರೀಯ ಪ್ರಶಸ್ತಿ’ಯನ್ನು ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಅವರಿಗೆ ಪುಣಚದ ಮನೆಯಲ್ಲಿ ಸೋಮವಾರ ಪ್ರದಾನ ಮಾಡಲಾಯಿತು. ₹ 11 ಲಕ್ಷ ನಗದು, ರಜತ ತಟ್ಟೆ, ರೇಷ್ಮೆಶಾಲು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಇಫ್ಕೊ ಫರ್ಟಿಲೈಸರ್‍ಸ್ ಕಂಪನಿಯ ಕರ್ನಾಟಕ ಪ್ರಾಂತೀಯ ಅಧಿಕಾರಿ ಡಾ.ನಾರಾಯಣ ಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿ, ‘53 ವರ್ಷಗಳಲ್ಲಿ ರೈತಾಪಿ ವರ್ಗದ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುತ್ತಿರುವ ಇಫ್ಕೊ ಸಹಕಾರಿ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಕೊಡ ಮಾಡುವ ‘ಇಫ್ಕೊ ಸಹಕಾರಿ ಬಂಧು’ ರಾಷ್ಟ್ರಮಟ್ಟದ ಪ್ರಶಸ್ತಿ ಈ ಬಾರಿ ಎಸ್.ಆರ್.ರಂಗಮೂರ್ತಿ ಅವರಿಗೆ ಸಂದಿರುವುದು ರಾಜ್ಯಕ್ಕೆ ಹೆಮ್ಮೆ. ಹತ್ತು ವರ್ಷಗಳ ಬಳಿಕ ಕನ್ನಡಿಗ ಸಾಧಕರೊಬ್ಬರು ಪ್ರಶಸ್ತಿಗೆ ಭಾಜನರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಕಾರ್ಯಕರ್ತ, ರೈ ಎಸ್ಟೇಟ್‌ನ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ‘ಯಾವುದೇ ಪ್ರಚಾರಗಳಿಲ್ಲದೇ ಸಹಕಾರಿ ಕ್ಷೇತ್ರ ಹಾಗೂ ಸಮಾಜದ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡಿದ ಎಸ್.ಆರ್.ರಂಗಮೂರ್ತಿ ಅವರು ಈ ಮೌಲ್ಯಯುತ ಪ್ರಶಸ್ತಿಗೆ ಅರ್ಹವಾದ ವ್ಯಕ್ತಿಯಾಗಿದ್ದಾರೆ’ ಎಂದರು.

‘ನಾಲ್ಕು ದಶಕಗಳಿಂದ ರಂಗಮೂರ್ತಿಯವರು ಮೌನವಾಗಿ ಮಾಡಿದ ಮಾನವ ಸೇವೆಗೆ ಪ್ರಶಸ್ತಿಗಳು ಅರಸಿಕೊಂಡು ಬರುತ್ತಿವೆ. ಪುಣಚವೆಂಬ ಪುಟ್ಟ ಗ್ರಾಮ ರಾಷ್ಟ್ರಮಟ್ಟದಲ್ಲಿ ಈ ಮೂಲಕ ಗುರುತಿಸಲ್ಪಡುತ್ತಿದೆ’ ಎಂದು ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಅಭಿಪ್ರಾಯಪಟ್ಟರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಅಭಿನಂದಿಸಿದರು.

ಕ್ಯಾಂಪ್ಕೊ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸ್ವಾಗತಿಸಿದರು. ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ ವಂದಿಸಿದರು.

ಪ್ರಗತಿಪರ ಕೃಷಿಕ ಜಯಶ್ಯಾಂ ನೀರ್ಕಜೆ ಸಹಕರಿಸಿದರು. ಕಾರ್ಯಕ್ರಮವನ್ನು ವರ್ಚುವಲ್‌ ಮೂಲಕ ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು