ಭಾನುವಾರ, ಸೆಪ್ಟೆಂಬರ್ 26, 2021
21 °C
ಅನಧಿಕೃತ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಕ್ರಮ

ತುಂಬೆ, ಮರವೂರು, ಎಎಂಆರ್‌ನಿಂದ ಮರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಅನಧಿಕೃತ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಜಿಲ್ಲಾ ಮರಳು ಸಮಿತಿ ಹಾಗೂ ಸಿಆರ್‌ಜೆಡ್‌ ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಇರುವ 7 ಸದಸ್ಯರ ಜಿಲ್ಲಾ ಸಮಿತಿ ಸಭೆ ಸೇರಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್‌)ದಲ್ಲಿ 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ಅರ್ಹ ಸಾಂಪ್ರದಾಯಿಕ ಮರಳು ಪರವಾನಗಿದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ತಾತ್ಕಾಲಿಕ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಅರ್ಜಿಗಳನ್ನು ಪರಿಶೀಲಿಸಿ, ತಾತ್ಕಾಲಿಕ ಪರವಾನಗಿ ನೀಡಲು ಕ್ರಮ ಕೈಗೊಳ್ಳಲಿದೆ.

ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹಣೆ ಹೆಚ್ಚಿಸಲು ನದಿ ಪಾತ್ರದಲ್ಲಿ ದೊರಕುವ ಮರಳನ್ನು ತೆಗೆದು, ವಿಲೇವಾರಿ ಮಾಡಲು ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್‌ಗೆ ವಹಿಸಲು ನಿರ್ಣಯಿಸಲಾಗಿದೆ.

ಮರವೂರು ಡ್ಯಾಂ ಹಾಗೂ ಬಂಟ್ವಾಳ ತಾಲ್ಲೂಕು ನಾವೂರು-ಶಂಭೂರು ಗ್ರಾಮದ ವ್ಯಾಪ್ತಿಯಲ್ಲಿನ ಎಎಂಆರ್‌ ಡ್ಯಾಂ ಪ್ರದೇಶದಲ್ಲಿ ಲಭ್ಯವಿರುವ ಮರಳು ತೆಗೆದು ವಿಲೇವಾರಿ ಮಾಡಲು ಸಂಬಂಧಪಟ್ಟ ಇಲಾಖೆ ಹಾಗೂ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಲಭ್ಯವಿರುವ ಮರಳು ತೆಗೆದು, ಜನರಿಗೆ ಪೂರೈಕೆ ಮಾಡಲು ನಿರ್ಣಯಿಸಿದೆ.

ಸಿಆರ್‌ಜೆಡ್ ವ್ಯಾಪ್ತಿಯ ನದಿ ಪಾತ್ರಗಳಲ್ಲಿ ಯಾವುದೇ ರೀತಿಯ ಮರಳು ದಿಬ್ಬಗಳನ್ನು ಅನಧಿಕೃತವಾಗಿ ತೆಗೆಯದಂತೆ ಹಾಗೂ ಅನಧಿಕೃತ ಮರಳು ಗಣಿಗಾರಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಇಲಾಖಾವಾರು ತಂಡಗಳನ್ನು ರಚಿಸಲಾಗಿದೆ. ಈ ತಂಡದ ಅಧಿಕಾರಿಗಳು ನಿಗದಿಪಡಿಸಿರುವ ದಿನಗಳಲ್ಲಿ ಕಡ್ಡಾಯವಾಗಿ 24X7 ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಹೊಸ ಮರಳು ನೀತಿ ಅನ್ವಯ ಸಿಆರ್‌ಜೆಡ್‌ಯೇತರ ಪ್ರದೇಶಗಳಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಿ, ಸಲ್ಲಿಸಿರುವ ವರದಿಯ ಅನುಸಾರ ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿಯ ಹಳ್ಳ, ತೊರೆಗಳಲ್ಲಿ ಗುರುತಿಸಿರುವ ಮರಳು ನಿಕ್ಷೇಪಗಳಿಂದ ಮರಳನ್ನು ತೆಗೆದು ವಿಲೇವಾರಿ ಮಾಡಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾ ಮರಳು ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು