ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನ ಉದ್ಘಾಟನೆ ವಿಳಂಬ: ದಲಿತ ಸಂಘಟನೆಗಳ ಆಕ್ರೋಶ

Last Updated 7 ಆಗಸ್ಟ್ 2021, 3:05 IST
ಅಕ್ಷರ ಗಾತ್ರ

ಮಂಗಳೂರು: ಡಿ.ಸಿ. ಮನ್ನಾ ಭೂಮಿ ಹಂಚಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಎಂ.ದೇವದಾಸ್, ಕಳೆದ ಹಲವು ವರ್ಷಗಳಿಂದ ದಲಿತ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಡಾ.ಬಿ.ಆರ್. ಅಂಬೇಡ್ಕರ್ ಭವನವು ಉರ್ವಸ್ಟೋರ್‌ನಲ್ಲಿ ₹18 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಆದರೆ ಕುಂಟು ನೆಪ ಹೇಳಿಕೊಂಡು ಭವನ ಉದ್ಘಾಟನೆಗೆ ಮೀನುಮೇಷ ಎಣಿಸುತ್ತಿರುವುದು ಖಂಡನೀಯ ಎಂದರು.

ದಲಿತ ಸಂಘರ್ಷ ಸಮಿತಿ ಮುಖಂಡ ಅಶೋಕ್ ಕೊಂಚಾಡಿ ಮಾತನಾಡಿ, ಪರಿಶಿಷ್ಟರಿಗೆ ಮೀಸಲಿಟ್ಟ ಡಿ.ಸಿ. ಮನ್ನಾ ಭೂಮಿಯ ಹಂಚಿಕೆಗೆ 2017ರಲ್ಲಿ ನಿವೇಶನ ರಹಿತರಿಂದ ಅರ್ಜಿ ಕರೆಯಲಾಗಿತ್ತು. ತಾಲ್ಲೂಕುವಾರು ಅರ್ಜಿ ಸಲ್ಲಿಕೆಯಾದ ನಂತರ ಅರ್ಜಿಗಳು ವಿಲೇವಾರಿಯಾಗದೇ ಗ್ರಾಮ ಕರಣಿಕರ ಕಚೇರಿಯಲ್ಲೇ ಉಳಿದುಕೊಂಡಿವೆ. ಇನ್ನೊಂದೆಡೆ ಡಿ.ಸಿ. ಮನ್ನಾ ಭೂಮಿಯ ಹಂಚಿಕೆಗೆ ಅಡ್ಡಿಪಡಿಸಬೇಕು ಎನ್ನುವ ಉದ್ದೇಶದಿಂದಲೇ ಜಿಲ್ಲಾಡಳಿತವು, ಭೂಕಂದಾಯ ಕಾಯ್ದೆಯನ್ವಯ ವಿತರಣೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿದರು.

ಡಿ.ಸಿ. ಮನ್ನಾ ಭೂಮಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸೀಮಿತವಾಗಿದ್ದು, ಈ ಹಿಂದಿನ ಜಿಲ್ಲಾಧಿಕಾರಿಗಳು ಅನುಸರಿಸಿಕೊಂಡು ಬಂದಿರುವ ಕ್ರಮ ತೆಗೆದುಕೊಳ್ಳುವ ಬದಲು, ರಾಜ್ಯ ಸರ್ಕಾರಕ್ಕೆ ಕಳುಹಿಸಿ ಅನಗತ್ಯ ಕಾಲಹರಣ ಮಾಡಲಾಗುತ್ತಿದೆ. ಪರೋಕ್ಷವಾಗಿ ಒತ್ತುವರಿದಾರರು, ಭೂ ಮಾಲೀಕರು ಮತ್ತು ಸ್ಥಾಪಿತ ಹಿತಾಸಕ್ತಿಗಳ ಹಿತ ಕಾಪಾಡಿಕೊಂಡು ಬರುತ್ತಿರುವುದು ಖಂಡನೀಯ ಎಂದರು.

ಜಿಲ್ಲಾಡಳಿತವು ಮುಂದಿನ 15 ದಿನಗಳಲ್ಲಿ ಭವನ ಉದ್ಘಾಟನೆ ಹಾಗೂ ಡಿ.ಸಿ. ಮನ್ನಾ ಭೂ ಹಂಚಿಕೆಗೆ ವಿಶೇಷ ಕಾರ್ಯಕ್ರಮ ರೂಪಿಸದಿದ್ದಲ್ಲಿ ಜಿಲ್ಲಾಡಳಿತ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ರೂಪಿಸಲಾಗುವುದು ಎಂದರು.

ದಲಿತ ಸಂಘಟನೆಗಳ ಮುಖಂಡರಾದ ರಮೇಶ್ ಕೋಟ್ಯಾನ್, ರಘು ಎಕ್ಕಾರ್, ಜಗದೀಶ್ ಪಾಂಡೇಶ್ವರ್, ಚಂದ್ರಕುಮಾರ್, ಗಿರೀಶ್‌ಕುಮಾರ್ ಉಳ್ಳಾಲ್, ಎಸ್.ಪಿ. ಆನಂದ್, ಸೇಸಪ್ಪ ಬೆದ್ರಕಾಡು, ಮಹಾಲಿಂಗ ಮಾಸ್ಟರ್, ಸರೋಜಿನಿ ಬಂಟ್ವಾಳ, ರೋಹಿತ್ ಉಳ್ಳಾಲ್, ಪ್ರೇಮ್ ಬಳ್ಳಾಲ್‌ಬಾಗ್ ಇದ್ದರು.

ಕೋಟ್‌:

ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ , ಡಿ.ಸಿ. ಮನ್ನಾ ಭೂಮಿ ವಿತರಣೆ ಆದೇಶಿಸಿದ್ದರು. ಸೆಂಥಿಲ್ ಹೋದ ನಾಲ್ಕೇ ದಿನಗಳಲ್ಲಿ ಈ ಆದೇಶವನ್ನು ವಾಪಸ್ ಪಡೆಯಲಾಗಿದೆ.
ಅಶೋಕ್ ಕೊಂಚಾಡಿ,
ದಸಂಸ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT