ಸೋಮವಾರ, ಜನವರಿ 20, 2020
18 °C
ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆಗಾಗಿ ಅಣಕು ಪ್ರದರ್ಶನ

ಮುಖವಾಡ ಧರಿಸಿ ಪಂಪ್‌ವೆಲ್‌ ಮೇಲ್ಸೇತುವೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹತ್ತು ವರ್ಷದಿಂದ ನಡೆಯುತ್ತಿರುವ ಪಂಪ್‌ವೆಲ್‌ ಮೇಲ್ಸೇತುವೆಯ ಕಾಮಗಾರಿ ಈ ಬಾರಿಯೂ ನಿಗದಿತ ದಿನಾಂಕದಂದು ಪೂರ್ಣಗೊಳ್ಳದಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಉದ್ಘಾಟನಾ ಕಾರ್ಯಕ್ರಮದ ಅಣಕು ಪ್ರದರ್ಶನ ನಡೆಸಿ ಬುಧವಾರ ಪ್ರತಿಭಟಿಸಿದರು.

ಜನವರಿ 1ರಂದು ಪಂಪ್‌ವೆಲ್‌ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಈ ಹಿಂದೆ ಪ್ರಕಟಿಸಿದ್ದರು. ಆದರೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಬುಧವಾರ ಸಂಜೆ ನಳಿನ್‌ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಡಿ.ವೇದವ್ಯಾಸ ಕಾಮತ್‌ ಅವರ ಮುಖವಾಡಗಳನ್ನು ಧರಿಸಿ ಜೀಪ್‌ನಲ್ಲಿ ಸ್ಥಳಕ್ಕೆ ಬಂದ ಕಾಂಗ್ರೆಸ್‌ ಕಾರ್ಯಕರ್ತರು, ಟೇಪ್‌ ಕತ್ತರಿಸಿ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರುವ ಅಣಕು ಪ್ರದರ್ಶನ ನಡೆಸಿದರು.

ಗೋರಿಗುಡ್ಡದ ಕಡೆಯಿಂದ ಪಂಪ್‌ವೆಲ್‌ಗೆ ಸಾಗುವ ರಸ್ತೆಯಲ್ಲಿ ಇಂಡಿಯಾನ ಆಸ್ಪತ್ರೆ ಎದುರಿನಿಂದ ಸೇತುವೆಯ ಮೇಲಕ್ಕೆ ಹೋದ ಪ್ರತಿಭಟನಾಕಾರರು ನಡಿಗೆ ಮೂಲಕ ಸಾಗಿದರು. ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಸಮೀಪದಲ್ಲಿ ಮೇಲ್ಸೇತುವೆ ಬಳಿ ಕಟ್ಟಿದ್ದ ಹಗ್ಗವನ್ನು ಕತ್ತರಿಸುವ ಮೂಲಕ ಸೇತುವೆ ಉದ್ಘಾಟನೆಯ ಅಣಕು ಪ್ರದರ್ಶಿದರು. ಸಂಸದರು ಹಾಗೂ ಶಾಸಕರ ಪ್ರತಿಕೃತಿಗಳನ್ನು ಸೇತುವೆಯಿಂದ ಕೆಳಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿ, ‘ಹತ್ತು ವರ್ಷಗಳಾದರೂ ಒಂದು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗದಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಯ ಸಂಸದರು ಮತ್ತು ಶಾಸಕರು ಈ ವಿಚಾರದಲ್ಲಿ ನಗರದ ಮಾನವನ್ನು ಹರಾಜು ಹಾಕಿದ್ದಾರೆ’ ಎಂದು ಟೀಕಿಸಿದರು.

ಪ್ರಪಂಚದ ಕುರಿತು ಮಾತನಾಡುವ ಬಿಜೆಪಿ ನಾಯಕರಿಗೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಸುವ ಸಾಮರ್ಥ್ಯ ಇಲ್ಲ. ಈಗ ಮಾತಿನಂತೆ ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸದೇ ತಲಪಾಡಿ ಟೋಲ್‌ ಗೇಟ್‌ನಲ್ಲಿ ಪ್ರತಿಭಟನೆಯ ನಾಟಕ ಆಡಿದ್ದಾರೆ. ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಸಿ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ, ಜಿಲ್ಲಾ ಪಂಚಾಯಿತಿ ಸದಸ್ಯ ಶಾಹುಲ್‌ ಹಮೀದ್‌, ಕಾಂಗ್ರೆಸ್‌ ಮುಖಂಡ ನಾಗೇಂದ್ರ ಕುಮಾರ್‌ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು