ಶನಿವಾರ, ಮಾರ್ಚ್ 25, 2023
22 °C
ಎ.ಜೆ. ಆಸ್ಪತ್ರೆಯ ಹೃದ್ರೋಗ ತಜ್ಞ

ಹೃದ್ರೋಗ | ಮಾರ್ಗಸೂಚಿ ಪಾಲನೆ ಮುಖ್ಯ: ಡಾ. ಮಂಜುನಾಥ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಆದರೆ, ಜನರು ಹೃದ್ರೋಗಗಳಿಗೆ ಸಂಬಂಧಿಸಿ ಆತಂಕ ಪಡಬೇಕಾಗಿಲ್ಲ, ಬದಲಾಗಿ ಎಚ್ಚರಿಕೆ ವಹಿಸಬೇಕು ಎಂದು ಎ.ಜೆ. ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಬಿ.ವಿ ಸಲಹೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಮಂಗಳವಾರ ಇಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾಹಿತಿ ನೀಡಿದರು. ‘ಹೃದಯ ಕಾಯಿಲೆಗಳಿಗೆ ಸಂಬಂಧಿಸಿ ನಮ್ಮ ಅನುಭವ ಹೇಳುವುದಕ್ಕಿಂತ ಅಂತರರಾಷ್ಟ್ರೀಯ ಮಾರ್ಗಸೂಚಿಯಂತೆ ವೈಜ್ಞಾನಿಕ ಸಂಗತಿಗಳನ್ನು ಜನರಿಗೆ ಹೇಳುವುದು ಹೆಚ್ಚು ಸೂಕ್ತ. ವೈದ್ಯರೇ ಜನರಲ್ಲಿ ಆತಂಕ ಹುಟ್ಟಿಸುವ ಹೇಳಿಕೆಗಳನ್ನು ನೀಡಿದರೆ, ಜನರು ಗಾಬರಿಗೊಳ್ಳುತ್ತಾರೆ’ ಎಂದರು.

‘40 ವರ್ಷ ಮೇಲಿನವರಲ್ಲಿ ಹೃದ್ರೋಗ ಸಾಮಾನ್ಯವಾಗಿ ಇರುತ್ತದೆ ಎಂಬ ವಿಚಾರ ಸರಿಯಲ್ಲ. 20 ವರ್ಷದವರಿಗೂ ಹೃದಯ ಕಾಯಿಲೆ ಕಾಡಬಹುದು. ಕೌಟುಂಬಿಕ ಹಿನ್ನೆಲೆ (ಕುಟುಂಬದಲ್ಲಿ ತಂದೆ–ತಾಯಿಗೆ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಆಗಿದ್ದರೆ) ಇದ್ದವರು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಕೊಲೆಸ್ಟ್ರಾಲ್, ರಕ್ತದೊತ್ತಡದ ಬಗ್ಗೆ ಕೂಡ ನಿಯಮಿತ ತಪಾಸಣೆ ಅಗತ್ಯ. ಹೃದಯ ಸಂಬಂಧಿ ಕಾಯಿಲೆಗಳು ಮೇಲ್ನೋಟಕ್ಕೆ ತಿಳಿಯದಿದ್ದರೂ, ಇಕೊ, ಆ್ಯಂಜಿಯೊಗ್ರಾಮ್ ತಪಾಸಣೆ ಮೂಲಕ ಪತ್ತೆ ಮಾಡಬಹುದು. ಎದೆನೋವು ಆಗಾಗ ಬರುತ್ತಿದ್ದರೆ ನಿರ್ಲಕ್ಷ್ಯ ಮಾಡದೆ, ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

‘ದಶಕಗಳ ಹಿಂದೆ ಹೃದ್ರೋಗಿಗಳು ಅಪಾಯದಿಂದ ಪಾರಾಗುವ ಪ್ರಮಾಣ ಶೇ 50ರಷ್ಟಿತ್ತು. ಈಗ ವೈದ್ಯಕೀಯ ಕ್ಷೇತ್ರದಲ್ಲಿ ಆವಿಷ್ಕಾರಗಳು ಈ ಪ್ರಮಾಣವನ್ನು ಶೇ 97ಕ್ಕೆ ಹೆಚ್ಚಿಸಿವೆ. ಹೃದಯಾಘಾತ ಆದಾಗ ತಕ್ಷಣಕ್ಕೆ ಚಿಕಿತ್ಸೆ ನೀಡಿದರೆ, ರೋಗಿ ಒಂದು ವಾರದಲ್ಲಿ ಸುಧಾರಿಸಿಕೊಳ್ಳಲು ಸಾಧ್ಯವಿದೆ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಜೀವನ ಶೈಲಿ ಮಹತ್ವದ್ದಾಗಿದೆ’ ಎಂದು ಡಾ. ಮಂಜುನಾಥ್ ಹೇಳಿದರು.

ನುರಿತ ತರಬೇತುದಾರರು: ಜಿಮ್‌ಗಳ ಬಗ್ಗೆ ಸಾಕಷ್ಟು ಅಪಪ್ರಚಾರಗಳು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿವೆ. ದೇಹಕ್ಕೆ ವ್ಯಾಯಾಮ ಅಗತ್ಯವಿರುತ್ತದೆ. ಜಿಮ್‌ನಲ್ಲಿ ನುರಿತ ತರಬೇತುದಾರರೇ ಇರುತ್ತಾರೆ. ಗೂಗಲ್ ನೋಡಿ ಮನೆಯಲ್ಲಿ ವ್ಯಾಯಾಮ ಮಾಡುವುದಕ್ಕಿಂತ ವೈಜ್ಞಾನಿಕವಾಗಿ ಕಲಿಸುವ ಜಿಮ್‌ಗಳಲ್ಲಿ ತರಬೇತಿ ಪಡೆಯುವುದು ಉತ್ತಮ ಎಂದು ಜಿಮ್ ತರಬೇತುದಾರ ಮೋಹಿತ್ ಮಲ್ಲಿ ಅಭಿಪ್ರಾಯಪಟ್ಟರು.

ದೇಹಕ್ಕೆ ಪ್ರೊಟೀನ್, ವಿಟಮಿನ್, ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಹೀಗಾಗಿ, ಜಿಮ್‌ಗಳಲ್ಲಿ ಪೇಯಗಳನ್ನು ಶಿಫಾರಸು ಮಾಡುತ್ತಾರೆ. ಆದರೆ, ಇದು ಕಡ್ಡಾಯವಲ್ಲ. ಈ ಪೇಯಗಳ ತಯಾರಿಕಾ ಕಂಪನಿಯ ಆಯ್ಕೆ ಕೂಡ ಅಷ್ಟೇ ಮುಖ್ಯ. ತ್ವರಿತವಾಗಿ ತೂಕ ಇಳಿಸಲು ಅವೈಜ್ಞಾನಿಕ ಕ್ರಮ ಅನುಸರಿಸುವುದು ದೇಹಕ್ಕೆ ಅಪಾಯ ಎಂದು ಜಿಮ್ ಪರಿಣಿತ ವಿಕಾಸ್ ಪುತ್ರನ್ ಮಾಹಿತಿ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

‘ಜೀವ ರಕ್ಷಕ ಸಾಧನ ಇರಲಿ’
ದೇಹದ ವ್ಯಾಯಾಮಕ್ಕಾಗಿ ಜಿಮ್‌ಗಳಿಗೆ ಹೋಗುವುದು ತಪ್ಪಲ್ಲ. ಜಿಮ್‌ಗಳಲ್ಲಿ ನುರಿತ ತರಬೇತುದಾರರು ಇರಬೇಕು. ತರಬೇತುದಾರರು ಪ್ರಥಮ ಚಿಕಿತ್ಸೆಯ ತರಬೇತಿ ಪಡೆದಿರಬೇಕು. ಜಿಮ್‌ಗಳಲ್ಲಿ ಕನಿಷ್ಠ ಜೀವರಕ್ಷಕ ಸಾಧನಗಳನ್ನು ಇಡುವಂತಾಗಬೇಕು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಲಾಗುವುದು ಎಂದು ಡಾ. ಮಂಜುನಾಥ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು