ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಪ್ರೀತಿಯೇ ಸ್ಫೂರ್ತಿ: ಮರಿಯಾ ಜ್ಯೋತಿ

‘ಬೌದ್ಧಿಕ ಅಂಗವಿಕಲರಲ್ಲಿ ಮುಟ್ಟಿನ ನಿರ್ವಹಣೆ’ ಕೈಪಿಡಿ ಬಿಡುಗಡೆ
Last Updated 3 ಡಿಸೆಂಬರ್ 2021, 12:17 IST
ಅಕ್ಷರ ಗಾತ್ರ

ಮಂಗಳೂರು: ಬೌದ್ಧಿಕ ಅಂಗವಿಕಲ ಹೆಣ್ಣು ಮಕ್ಕಳ ಮಾಸಿಕ ಋತುಸ್ರಾವ ನಿರ್ವಹಣೆ ಕುರಿತ ಕೈಪಿಡಿ ಬಿಡುಗಡೆ, ಬೌದ್ಧಿಕ ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ಮೂಲಕ ಕೊಡಿಯಾಲ್‌ಬೈಲ್‌ನಲ್ಲಿರುವ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಅಂಗವಿಕಲ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

‘ದಿ ಸ್ಯಾಮ್ಸ್‌ ಕ್ಲಿನಿಕ್’ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮಹನಾಝ್ ಅಬ್ದುಲ್ಲಾ ಬರೆದ ‘ಬೌದ್ಧಿಕ ಅಂಗವಿಕಲರಲ್ಲಿ ಮುಟ್ಟಿನ ನಿರ್ವಹಣೆ’ ಕುರಿತ ಕೈಪಿಡಿಯನ್ನು ಮಂಗಳೂರಿನ ಮೊದಲ ವಿಶೇಷ ಚೇತನರ ಶಾಲೆಯ ಸಂಸ್ಥಾಪಕಿ ಮರಿಯಾ ಜ್ಯೋತಿ ಬಿಡುಗಡೆಗೊಳಿಸಿದರು. ‘ಸಮಾಜದ ಭಾಗವಾಗಿರುವ ಅಂಗವಿಕಲರನ್ನು ಸಮಾನವಾಗಿ ಕಾಣಬೇಕು. ಅವರಿಗೆ ಹೆಚ್ಚು ಪ್ರೀತಿ ತೋರುವ ಮೂಲಕ ಸಮಾಜದ ಮುಖ್ಯವಾಹಿನಿ ತರಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದರು.

‘ಮಾಸಿಕ ಋತುಸ್ರಾವದ ವೇಳೆ ಕೆಲವು ಹೆಣ್ಣು ಮಕ್ಕಳಿಗೆ ಶಾಲೆಗೆ ರಜೆ ಮಾಡುವ ಸಂದರ್ಭಗಳು ಬರುತ್ತವೆ. ಸಮಸ್ಯೆಯನ್ನು ಸುಲಭಗೊಳಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಇಂತಹ ಸಂದರ್ಭಗಳನ್ನು ಕಡಿಮೆ ಮಾಡಬಹುದು. ಮಹನಾಝ್ ಸಿದ್ಧಪಡಿಸಿರುವ ಕೈಪಿಡಿ, ಸಾಮಾನ್ಯ ಹೆಣ್ಣು ಮಕ್ಕಳ ಜತೆಗೆ, ವಿಶೇಷ ಮಕ್ಕಳ ಪಾಲಕರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಹೇಳಿದರು.

ನಡವಳಿಕೆ ತರಬೇತುದಾರ್ತಿ ವಿದ್ಯಾ ಶೆಣೈ ಮಾತನಾಡಿ, ‘ಋತುಸ್ರಾವದ ಸಂದರ್ಭದಲ್ಲಿ ಬೌದ್ಧಿಕ ವಿಶೇಷ ಚೇತನ ಹೆಣ್ಣು ಮಕ್ಕಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಪಾಲಕರಿಗೆ ಸವಾಲಾಗಿದೆ. ಋತುಸ್ರಾವ ಜೈವಿಕ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಮುಕ್ತವಾಗಿ ಚರ್ಚಿಸಲು ಹಿಂಜರಿಕೆ ಬೇಡ. ಜಾಹೀರಾತು ಸಂಸ್ಥೆಗಳು ಇತ್ತೀಚೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಅತಿರಂಜಿತವಾಗಿ ಚಿತ್ರಿಸುತ್ತಿವೆ. ಋತುಸ್ರಾವದ ವೇಳೆ ಆರೋಗ್ಯಕ್ಕೆ ಹಿತವಾಗಿ ಸ್ಯಾನಿಟರ್ ಪ್ಯಾಡ್‌ಗಳ ಬಳಕೆ ಮಹತ್ವದ್ದಾಗಿದೆ’ ಎಂದರು.

ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ಆಸ್ಪತ್ರೆಯು ಅಂಗವಿಕಲರು, ವಿಶೇಷ ಮಕ್ಕಳಿಗೆ ಸೌಹಾರ್ದ ವಾತಾವರಣ ಒದಗಿಸಿದೆ. ಹೊರರೋಗಿ ಕ್ಲಿನಿಕಲ್ ಸೌಲಭ್ಯ ಒದಗಿಸಲು ಬದ್ಧವಾಗಿದೆ. ಬೌದ್ಧಿಕ ಅಂಗವಿಕಲರು ಎದುರಿಸುತ್ತಿರುವ ಸ್ತ್ರೀರೋಗ ಸಮಸ್ಯೆಗಳಿಗೆ ವಿಶೇಷ ಒತ್ತು ನೀಡುವ ಮೂಲಕ ಬಾಲಕಿಯರು ಮತ್ತು ಮಹಿಳೆಯರಿಗೆ ಇಂತಹ ಸೇವೆ ಒದಗಿಸುತ್ತಿರುವ ಆಸ್ಪತ್ರೆ ಇದಾಗಿದೆ ಎಂದರು.

ಬ್ಯಾಂಕ್ ನಿವೃತ್ತ ಅಧಿಕಾರಿ ಲಿಡಿತ್ ಪಿಂಟೊ, ದೇರ್ಲಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ಸ್ಯಾಲಿಮೇರಿ ಅಬ್ರಹಾಂ ಇದ್ದರು. ಡಾ. ಶೆಮ್‌ಝಾಜ್ ಅರಕ್ಕಲ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT