ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬೆ ಕಿಂಡಿ ಅಣೆಕಟ್ಟೆ ಆವರಣದಲ್ಲಿ ಜಲ ದೀಪಾವಳಿ ಆಚರಣೆ

Published 10 ನವೆಂಬರ್ 2023, 6:17 IST
Last Updated 10 ನವೆಂಬರ್ 2023, 6:17 IST
ಅಕ್ಷರ ಗಾತ್ರ

ಮಂಗಳೂರು: ‘ನೀರಿಗಾಗಿ ಮಹಿಳೆಯರು– ಮಹಿಳೆಯರಿಗಾಗಿ ನೀರು’ ಪರಿಕಲ್ಪನೆಯಲ್ಲಿ ಸ್ವ ಸಹಾಯ ಸಂಘಗಳ ಸುಮಾರು 60 ಮಹಿಳೆಯರು ನೀರು ಶುದ್ಧೀಕರಣ ಪ್ರಕ್ರಿಯೆ, ಪ್ರಯೋಗಾಲಯದಲ್ಲಿ ನೀರು ಪರೀಕ್ಷಿಸುವ ಕ್ರಮವನ್ನು ಕುತೂಹಲದಿಂದ ವೀಕ್ಷಿಸಿದರು. 

ಇದಕ್ಕೆ ಅವಕಾಶ ಒದಗಿಸಿದ್ದು ‘ಜಲ ದೀಪಾವಳಿ’. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಅಮೃತ್ ಅಭಿಯಾನದಡಿ ನಗರದ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಜಲ ದೀಪಾವಳಿ ಕಾರ್ಯಕ್ರಮದ ಭಾಗವಾಗಿ, ಗುರುವಾರ ಬಂಟ್ವಾಳ ತಾಲ್ಲೂಕಿನ ತುಂಬೆ ಅಣೆಕಟ್ಟೆ ವೀಕ್ಷಣೆಗೆ 30 ಸ್ವ ಸಹಾಯ ಗುಂಪುಗಳ ಆಯ್ದ 60 ಮಹಿಳೆಯರನ್ನು ಕರೆದೊಯ್ಯಲಾಗಿತ್ತು. 

ಸಂಸದ ನಳಿನ್‌ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ನೀರಿನ ಮಿತವ್ಯಯ, ನೀರು ಪೋಲಾಗದಂತೆ ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಜಲಮೂಲ, ಜಲ ಪೂರೈಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಜಲ ದೀಪಾವಳಿಯನ್ನು ನವೆಂಬರ್ 7 ಮತ್ತು 9ರಂದು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಕೈಗಾರಿಕೆಗಳಿಗೆ ನೇತ್ರಾವತಿ ನದಿಯ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಈಗ ಸಮುದ್ರ ನೀರಿನ ಬಳಕೆಯಿಂದಾಗಿ, ನದಿ ನೀರಿನ ಮೇಲಿನ ಒತ್ತಡ ತಗ್ಗಿದೆ ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ‘ಎಲ್ಲ ನದಿಗಳು ಸ್ತ್ರೀ ಹೆಸರನ್ನೇ ಹೊಂದಿವೆ. ನಿಸ್ವಾರ್ಥ ಮನೋಭಾವದಿಂದ ಮಹಿಳೆ ಕುಟುಂಬ ನಿರ್ವಹಣೆ ಮಾಡುವಂತೆ, ನದಿಗಳು ಫಲಾಪೇಕ್ಷೆ ಇಲ್ಲದೆ ಜೀವಿಗಳಿಗೆ ನೀರನ್ನು ಕೊಡುತ್ತವೆ. ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಜಲ ದೀಪಾವಳಿಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ‘ಪಾಲಿಕೆಯ ಎಲ್ಲ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ವಾಹನ ತೊಳೆಯುವ ನೆಪದಲ್ಲಿ ನೀರನ್ನು ಪೋಲು ಮಾಡಬಾರದು’ ಎಂದರು.

‘ಬಟ್ಟೆ ತೊಳೆಯಲು ಹೆಚ್ಚು ನೀರನ್ನು ಬಳಸುತ್ತಿದ್ದೆ. ನೀರು ಸಂಸ್ಕರಣೆ ವಿಧಾನವನ್ನು ನೋಡಿದ ಮೇಲೆ ನೀರಿನ ಮಹತ್ವದ ಅರಿವಾಗಿದೆ. ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿದೆ’ ಎಂದು ಸ್ವ ಸಹಾಯ ಸಂಘದ ಸದಸ್ಯೆಯರಾದ ಮೇಘಾ ಮತ್ತು ತಾರಾ ಅಭಿಪ್ರಾಯ ಹಂಚಿಕೊಂಡರು.

ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ಭರತ್ ಕುಮಾರ್, ಲೋಹಿತ್ ಅಮೀನ್, ಗಣೇಶ್, ಸದಸ್ಯ ದಿವಾಕರ್ ಪಾಂಡೇಶ್ವರ, ಆಯುಕ್ತ ಆನಂದ ಸಿ.ಎಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT