ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಹುಭಾಷಿಕ ಸಂವೇದನೆಯೇ ಮಹತ್ವದ ಮೌಲ್ಯ’

ಮಮತೆ–ಸಮತೆಯೇ ಸಂಸ್ಕೃತಿ: ಜಯಂತ ಕಾಯ್ಕಿಣಿ
Last Updated 20 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಮಂಗಳೂರು: ‘ಸಂಸ್ಕೃತಿ ಎಂದರೆ ಪ್ರವಾಸೋದ್ಯಮಕ್ಕಾಗಿ ಗೋಡೆಗೆ ಚಿತ್ರ ಹಾಕುವುದಲ್ಲ. ಅದು ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕು. ಮನೆಯಲ್ಲಿ ಗೋಬಿ ಮಂಚೂರಿ ತಿಂದು, ಬಂದವರಿಗೆ ದಕ್ಷಿಣ ಭಾರತದ ವಿಶೇಷ ತಿನಿಸು ‘ಮೂಡೆ’ ಎಂದು ಬಡಿಸಿದರೆ ಅಪ್ರಮಾಣಿಕತೆ ಆಗುತ್ತದೆ. ನಾವು ಮನೆಯಲ್ಲಿ ಏನು ತಿನ್ನುತ್ತೇವೆಯೋ? ಏನು ಆಚರಿಸುತ್ತೇವೆಯೋ? ಅದನ್ನೇ ಇತರರಿಗೂ ಉಣಬಡಿಸಬೇಕು...

ಹೀಗೆ ‘ಪ್ರಜಾವಾಣಿ’ ಜೊತೆ ಮಾತಿಗೆ ಪ್ರತಿಕ್ರಿಯಿಸಿದವರು ಸಾಹಿತಿ ಜಯಂತ ಕಾಯ್ಕಿಣಿ. ಟೀಕೆ ಕಾಸರಗೋಡು ಅವರ ಕೃತಿಗಳ ಬಿಡುಗಡೆಗೆ ಬಂದಿದ್ದ ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ.

ಕರಾವಳಿಯಲ್ಲಿ ಹಲವು ಭಾಷೆಗಳ ಜನರಿದ್ದಾರೆ. ಬಹುಭಾಷಾ ಸಾಮರಸ್ಯದದ ಕುರಿತು ನಿಮ್ಮ ನಿಲುವು?

ನನ್ನ ಮನೆಮಾತು ಕೊಂಕಣಿ. ನಾನು ಓದಿದ್ದು–ಬರೆದದ್ದು ಕನ್ನಡದಲ್ಲಿ. ಕೆಲಸಕ್ಕಾಗಿ ಮುಂಬೈಗೆ ಹೋದಾಗ ನನ್ನ ಪಕ್ಕದಲ್ಲಿ ಗುಜರಾತಿ ಇದ್ದ. ನಾನು ಮದುವೆಯಾದ ಹುಡುಗಿ ಮರಾಠಿ. ಕಚೇರಿಗೆ ಹೋದಾಗ ಹಿಂದಿ ಬಂತು. ಬಾಸ್‌ ಬಳಿ ಜಗಳವಾಡಲು ಇಂಗ್ಲಿಷ್‌ ಕಲಿತೆ. ಹೀಗೆ ಭಾಷೆಗಳನ್ನು ಕಲಿಯುತ್ತಾ ಹೋಗುತ್ತಿದ್ದೇನೆ

ಬಹುಭಾಷಿಕ ಸಂವೇದನೆಯು ಮಹತ್ವದ ಮೌಲ್ಯ ಹೊಂದಿದೆ. ಪ್ರತಿ ಭಾಷೆಯೂ ಒಂದು ಕಿಟಕಿ, ಹೊಸ ಬಾಗಿಲು ತೆರೆಯುತ್ತದೆ. ಎಷ್ಟು ಭಾಷೆಗಳು ನಿಮಗೆ ಬರುತ್ತದೆಯೋ, ಅಷ್ಟು ಮನಸ್ಸು ಮತ್ತು ಹೃದಯ ವಿಶಾಲ ಆಗುತ್ತದೆ. ಇದೇ ಭಾರತದ ದೊಡ್ಡ ಹೆಗ್ಗಳಿಕೆ. ಒಂದೇ ಭಾಷೆಗೆ ಅಂಟಿಕೊಂಡು ಕೂರುವುದಲ್ಲ. ಪ್ರತಿ ಭಾಷೆಯೂ ಒಂದೊಂದು ದೃಷ್ಟಿಕೋನ ಹೇಳುತ್ತದೆ

ಭಾಷೆಯಲ್ಲಿ ಸಮಾಜದ ವಿವೇಕ, ಹಲವಾರು ವರ್ಷಗಳ ಅನುಭವ ಸಾರ. ಜೀವನ ಮೌಲ್ಯಗಳು ಇರುತ್ತವೆ. ಹೀಗಾಗಿ ನನಗೆ ಅದರ ಬಗ್ಗೆ ಖುಷಿ ಇದೆ

ಕಾಸರಗೋಡಿನ ಬಗ್ಗೆ ಏನಂತೀರಿ?

ನಾನು ಉತ್ತರ ಕನ್ನಡದವನು. ಆದರೆ, ಕೈಯ್ಯಾರ ಕಿಞಿಣ್ಣ ರೈ, ಕೆ.ಟಿ. ವೇಣುಗೋಪಾಲ, ಟೀಕೆ ಕಾಸರಗೋಡು, ಎಂ. ವ್ಯಾಸ, ಪೆರ್ಲ ಕೃಷ್ಣ ಭಟ್, ಶೇಣಿ ಹೀಗೆ ಹಲವರ ವಿದ್ವತ್‌ಗಳ ನಂಟಿದೆ. ಕಾಸರಗೋಡು ಅದ್ಭುತ ಜೀವನ ಮೌಲ್ಯ ನೀಡಿದ ಪರಿಸರ. ಭಾಷಾ ಪರಂಪರೆ, ಕನ್ನಡಕ್ಕೆ ಕಾಸರಗೋಡಿನ ಕೊಡುಗೆ ಅಪಾರ.

ಸಾಮಾಜಿಕ ಜಾಲತಾಣ ಮತ್ತು ಸಾಹಿತ್ಯ...?

ಸಾಮಾಜಿಕ ಜಾಲತಾಣ ಬಳಕೆಯಲ್ಲಿ ವೈಯಕ್ತಿಕ ನಿಯಂತ್ರಣ ಹಾಗೂ ವಿವೇಚನೆ ಹೊಂದಬೇಕು. ಅದು ಚಟ ಆಗಬಾರದು. ಅದರ ಮೂಲಕ ಒಳ್ಳೆಯ ಸಾಹಿತ್ಯದ ಓದು, ಸಿನಿಮಾಗಳನ್ನು ನೋಡಬೇಕು. ಗುಡ್‌ ಮಾರ್ನಿಂಗ್, ಗುಡ್ ನೈಟ್, ರೆಡಿಮೇಡ್ ಫಾರ್ವರ್ಡ್‌ಗೆ ಸೀಮಿತಗೊಳಿಸಿದರೆ, ನಿಮ್ಮ ಆಯುಸ್ಸು ವ್ಯರ್ಥವಾಗುತ್ತದೆ.

ಪುಸ್ತಕದ ಓದಿನ ಬಗ್ಗೆ...?

ನನ್ನನ್ನು ಹಳೇ ಕಾಲದವನು ಎಂದು ಹೇಳಿದರೂ ಪರವಾಗಿಲ್ಲ. ನನಗೆ ಪುಸ್ತಕದ ಓದೇ ಖುಷಿ ನೀಡುತ್ತದೆ. ಆ ಓದಿನ ಅನುಭವವೇ ಬೇರೆ. ಪುಸ್ತಕದ ಓದು ನಿಮಗೆ ನೂರಾರು ಪುಟಗಳು, ಮಾರ್ಗಗಳು, ವಿಷಯಗಳು, ಆಲೋಚನೆಗಳನ್ನು ಕೊಡುತ್ತದೆ. ನಿಮ್ಮನ್ನು ಪರಿಪೂರ್ಣವಾಗಿಸುತ್ತಾ ಹೋಗುತ್ತದೆ.

ನಿಮ್ಮ ಸಾಹಿತ್ಯ ಮತ್ತು ಸಿನಿಮಾ ನಂಟು ಹೇಗೆ ಬಂತು?

ನನಗೆ ಸಾಹಿತ್ಯ ಇಷ್ಟ. ನಾನು ಸಿನಿಮಾ ಕ್ಷೇತ್ರಕ್ಕೆ ಹೋಗಿರಲಿಲ್ಲ. ಆದರೆ, ಯೋಗರಾಜ್ ಭಟ್ಟರು ಹಾಡು ಬರೆದು ಕೊಡುವಂತೆ ಹೇಳಿದರು. ಹಾಗಾಗಿ, ‘ಮುಂಗಾರು ಮಳೆ’ಗೆ ಹಾಡು ಬರೆದೆ. ಅದೊಂದು ಆಕಸ್ಮಿಕ. ಅಲ್ಲಿ ಟ್ಯೂನಿಗೆ ಹಾಡು ಬರಿಯಬೇಕು. ಅದೇನು ದೊಡ್ಡ ಸಾಹಿತ್ಯ ಸೃಷ್ಟಿ ಅಲ್ಲ. ಆದರೆ, ಜನಕ್ಕೆ ಅದು ಇಷ್ಟ ಆಯಿತು. ಇನ್ನಷ್ಟು ಜನ ನನ್ನ ಬಳಿ ಬರೆಸಲು ಬಂದರು.

ಸಿನಿಮಾ ಹಾಡಿನಲ್ಲಿ ಹೆಚ್ಚು ಹೇಳಲು ಆಗುವುದಿಲ್ಲ. ಆದರೆ, ಭಾಷೆಯನ್ನು ಶುದ್ಧವಾಗಿ ಇಡಬಹುದು. ಸಿನಿಮಾದ ಪರಿಭಾಷೆಯೇ ಬೇರೆ. ಹಾಡು, ಛಾಯಾಗ್ರಹಣ, ಕತೆ, ನಟನೆ ಎಲ್ಲವೂ ಸೇರಿದಾಗ ಒಂದು ಉತ್ತಮ ಅನುಭವ ಆಗುತ್ತದೆ. ಕೇವಲ ಹಾಡಿನಿಂದ ಸಿನಿಮಾ ಓಡುವುದು ಕಷ್ಟ. ಸಿನಿಮಾ ಭಾಷೆಯೇ ಚೆನ್ನಾಗಿರಬೇಕು. ಹೊಸ ಅಲೋಚನೆ ನೀಡಬೇಕು.

‘ಸಂಸ್ಕೃತಿ ಎಂದರೆ ಮಮತೆ ಮತ್ತು ಸಮತೆ’

‘ಪ್ರವಾಸೋದ್ಯಮ, ಉದ್ಯಮಗಳೆಲ್ಲ ಬೇರೆ ವಿಚಾರಗಳು. ಆದರೆ, ಸಂಸ್ಕೃತಿ ಎಂದರೆ ಜೀವನ ಮೌಲ್ಯ, ಪ್ರೀತಿ, ಒಂದಾಗಿರುವುದು, ಸಹಬಾಳ್ವೆ. ಸಂಸ್ಕೃತಿ ಎಂದರೆ ಪೋಸ್ಟರ್ ಅಲ್ಲ. ನಮ್ಮ ಸಂಸ್ಕೃತಿ ಎಂದುಕಂಬಳ ಇತ್ಯಾದಿಗಳನ್ನು ವೈಭವೀಕರಿಸಿ, ಆ ಬಳಿಕ ಜಗಳ ಆಡಿಕೊಂಡು, ದ್ವೇಷದಿಂದ ಇದ್ದರೆ, ಸಂಸ್ಕತಿ ಅಲ್ಲವೇ ಅಲ್ಲ. ಸಂಸ್ಕೃತಿ ಎಂದರೆ ಪ್ರೀತಿ, ಮಮತೆ ಮತ್ತು ಸಮತೆ. ಇದೇ ದೇಶದ ಬುನಾದಿ. ವೈವಿಧ್ಯಗಳ ಮಧ್ಯೆ ಒಂದಾಗಿರುವುದೇ ಈ ದೇಶದ ಸಂಸ್ಕೃತಿ’ ಎಂದು ಜಯಂತ ಕಾಯ್ಕಿಣಿ ಹೇಳಿದರು.

‘ನನ್ನ ತಂದೆ (ಗೌರೀಶ ಕಾಯ್ಕಿಣಿ) ಹೇಳುತ್ತಿದ್ದರು, ‘ಭಾರತ ಒಂದೇ ಕೋಲ್ಗಂಬದ ಡೇರೆ ಅಲ್ಲ. ಸಾವಿರ ಕಂಬಗಳ ಚಪ್ಪರ. ಬಹು ಸಂವೇದನೆ, ಜೀವನಕ್ರಮ, ಭಾಷೆಗಳ ಜನ ಒಟ್ಟಿಗೆ ಜೀವಿಸುವ ಸಂಸ್ಕೃತಿ’ ಎಂದು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT