ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆರೋಸಾ ಶಾಲೆ ವಿವಾದ: ಪ್ರತಿಭಟನಾನಿರತ VHP ಕಾರ್ಯಕರ್ತರು ಪೊಲೀಸ್‌ ವಶಕ್ಕೆ

Published 19 ಫೆಬ್ರುವರಿ 2024, 6:31 IST
Last Updated 19 ಫೆಬ್ರುವರಿ 2024, 6:31 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೇಂಟ್ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಹಾಗೂ ಇತರ ಮೇಲೆ ದಾಖಲಿಸಿದ ಪ್ರಕರಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ , ಬಜರಂಗ ದಳ ಕಾರ್ಯಕರ್ತರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನಗರ ಪೊಲೀಸ್ ಕಮಿಷನರ್‌ಗೆ ಮನವಿ ಕೊಡುವುದಾಗಿ ಹೇಳಿ 'ಜೈ ಶ್ರೀರಾಮ' ಘೋಷಣೆ ಕೂಗುತ್ತ ಮೆರವಣಿಗೆ ‌ಹೊರಟಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಆರಂಭದಲ್ಲಿ ಮಿನಿ‌ ವಿಧಾನ ಸೌಧದ ಎದುರು ಪ್ರತಿಭಟನೆ ಆರಂಭಿಸಿದ ಪ್ರತಿಭಟನಕಾರರು ನಂತರ ಕ್ಲಾಕ್ ಟವರ್ ಎದುರಿನ ರಸ್ತೆಯಲ್ಲಿ ನಿಂತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೆಂಡನ್ ಅವರು, ‘ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿ ಪಾಠ ಮಾಡಿದ್ದನ್ನು ಮಕ್ಕಳು ಮನೆಗೆ ಬಂದು ಹೇಳಿದ್ದರು. ಮಕ್ಕಳ‌‌ ಪಾಲಕರು ಈ ಬಗ್ಗೆ ದೂರು ಕೊಟ್ಟರೆ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಆದರೆ, ಶಿಕ್ಷಕಿಯನ್ನು ವಜಾಗೊಳಿಸಬೇಕೆಂದು ಪ್ರತಿಭಟನೆ ಮಾಡಿದ ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಆರೋಪಿಸಿದರು.

'ನಾವು ಪೊಲೀಸ್ ಕಮಿಷನರ್ ಕಚೇರಿಗೆ ಮೆರವಣಿಗೆ ತೆರಳಿ ಮನವಿ‌ ಸಲ್ಲಿಸಲು ಅವಕಾಶ ಕೊಡಬೇಕು. ನೀವು ಅವಕಾಶ ನೀಡದಿದ್ದರೂ ನಾವು ಮೆರವಣಿಗೆಯಲ್ಲಿ ಹೋಗಿ ಮನವಿ ಕೊಟ್ಟೇ ಕೊಡುತ್ತೇವೆ' ಎಂದು ಶಿವಾನಂದ ಮೆಂಡನ್ ಹೇಳಿದಾಗ ಪ್ರತಿಭಟನಕಾರರು, ಪೊಲೀಸರು ಹಾಕಿದ್ದ ಬ್ಯಾರಿಕೇಟ್ ಬದಿಗೆ ಸರಿಸಿ, ಮುನ್ನುಗ್ಗಿದರು. ಕೆಲವರು ರಸ್ತೆಯ ಮೇಲೆ‌ ಮಲಗಿ ಜೈ ಶ್ರೀರಾಮ ಘೋಷಣೆ ಕೂಗಿದರು.

ಪೊಲೀಸರು ಅವರನ್ನು ವಶಕ್ಕೆ ಪಡೆದರು.

'ಪ್ರತಿಭಟನಕಾರರು ಮೆರವಣಿಗೆ ಪೂರ್ವ ಅನುಮತಿ ಪಡೆದಿರಲಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT