ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಮಟ್ಟ ಸುಧಾರಣೆಗೆ ‘ಕಲಿಕಾ ಚೇತರಿಕೆ’

ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನ
Last Updated 1 ಮೇ 2022, 6:10 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ನಿಂದಾಗಿ ಶಾಲೆಗಳಲ್ಲಿ ಭೌತಿಕ ತರಗತಿಗಳು ನಡೆಯದೆ, ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ರೂಪಿಸಿದೆ.

ಶೈಕ್ಷಣಿಕ ವರ್ಷದ ಆರಂಭದಿಂದ ರಾಜ್ಯದಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಯೋಜನೆ ಅಡಿಯಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳು ತಾವು ಕಲಿತ ಹಿಂದಿನ ಎರಡು ವರ್ಷಗಳ ವಿಷಯಗಳನ್ನು ‘ಕಲಿಕಾ ಹಾಳೆ’ ಎಂಬ ಪ್ರತ್ಯೇಕ ಪುಸ್ತಕದ ಮೂಲಕ ಅಭ್ಯಾಸ ಮಾಡಬೇಕಾಗಿದೆ.

2020–21 ಹಾಗೂ 2021–22ನೇ ಸಾಲಿನಲ್ಲಿ ಕೋವಿಡ್ ಉಲ್ಬಣಿಸಿದ ಕಾರಣಕ್ಕೆ ಹೆಚ್ಚಿನ ಅವಧಿ ಶಾಲೆಗಳು ಮುಚ್ಚಿದ್ದವು. ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ದೊರೆತಿದ್ದರೂ, ಇದು ಭೌತಿಕ ತರಗತಿಯಷ್ಟು ಪರಿಣಾಮಕಾರಿಯಾಗಿ ಮಕ್ಕಳನ್ನು ತಲುಪಿಲ್ಲ ಎಂಬುದನ್ನು ಮನಗಂಡ ಶಿಕ್ಷಣ ಇಲಾಖೆ, ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಈ ಯೋಜನೆ ಸಿದ್ಧಪಡಿಸಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಿ, ರಾಜ್ಯದಾದ್ಯಂತ ಏಕರೂಪದ ಶೈಕ್ಷಣಿಕ ಪ್ರಕ್ರಿಯೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಪ್ರತಿ ತರಗತಿಗೆ ಹಿಂದಿನ ಎರಡು ವರ್ಷದ ಅತ್ಯಗತ್ಯ ಕಲಿಕಾ ಫಲಗಳು, ಪ್ರಸ್ತುತ ತರಗತಿಯ ಅಗತ್ಯ ಕಲಿಕಾ ಫಲಗಳನ್ನು ಆಧರಿಸಿ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ತರಬೇತಿ ನೀಡುವ ಶಿಕ್ಷಕರಿಗೆ ಪ್ರತ್ಯೇಕ ಕೈಪಿಡಿ ತಯಾರಿಸಿದ್ದು, ಕಲಿಕಾ ಹಾಳೆ ಮತ್ತು ಈ ಕೈಪಿಡಿ ಆಧರಿಸಿ, ಶಿಕ್ಷಕರು ಮಕ್ಕಳಿಗೆ ತರಗತಿಯಲ್ಲಿ ಪಾಠ ಮಾಡುತ್ತಾರೆ.

ಪ್ರತಿ ವಿಷಯದ ಕಲಿಕಾ ಹಾಳೆ ಪುಸ್ತಕವು ಸುಮಾರು 150 ಪುಟಗಳನ್ನು ಒಳಗೊಂಡಿದೆ. ಕಲಿಕಾ ಹಾಳೆಯಲ್ಲಿರುವ ಹಿಂದಿನ ಎರಡು ವರ್ಷಗಳ ವಿಷಯಗಳು ಮಗುವಿಗೆ ಎಷ್ಟು ಅರ್ಥವಾಗಿವೆ ಎಂಬುದನ್ನು ಮೌಲ್ಯಮಾಪನ ಮಾಡಿ ಶಿಕ್ಷಕರು ಅಂಕ ನೀಡುತ್ತಾರೆ. ಆಯ್ದ ಶಿಕ್ಷಕರಿಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿ ವಿಷಯಕ್ಕೆ ಸಂಬಂಧಿಸಿ, ಒಂದೊಂದು ತರಗತಿಗೆ ಇಬ್ಬರು ಶಿಕ್ಷಕರಂತೆ ತರಬೇತಿ ಪಡೆದಿದ್ದಾರೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಡಿಎಸ್‌ಇಆರ್‌ಟಿಯು ದೀಕ್ಷಾ ಪೋರ್ಟಲ್‌ನಲ್ಲಿ ಕಲಿಕಾ ಚೇತರಿಕೆಯ ಪೂರ್ವಸಿದ್ಧತೆ, ಮೌಲ್ಯಾಂಕನಗಳ ಮಾಹಿತಿಯನ್ನು ಒದಗಿಸಿದೆ. ಇದರಲ್ಲಿರುವ ವಿಡಿಯೊಗಳಿಂದ ಶಿಕ್ಷಕರು ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿದೆ.

10ನೇ ತರಗತಿಗೆ ಸೇತುಬಂಧ ಕಾರ್ಯಕ್ರಮ ಮುಂದುವರಿಯಲಿದೆ. ಉಳಿದ ಶೈಕ್ಷಣಿಕ ಚಟುವಟಿಕೆಗಳನ್ನು ಮೊದಲಿನಂತೆಯೇ ನಡೆಸಿ, ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಅಣಿಗೊಳಿಸಲು ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಡಿಡಿಪಿಐ ಸುಧಾಕರ್ ಎಸ್ ತಿಳಿಸಿದರು.

1ರಿಂದ 9ನೇ ತರಗತಿವರೆಗಿನ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಸುಮಾರು 1 ಲಕ್ಷ ಮಕ್ಕಳು ಕಲಿಕಾ ಚೇತರಿಕೆಯ ಪ್ರಯೋಜನ ಪಡೆಯಲಿದ್ದಾರೆ. 1ರಿಂದ 3ನೇ ತರಗತಿವರೆಗೆ ಅಕ್ಷರ ಜ್ಞಾನ ಸಾಮರ್ಥ್ಯ ಮತ್ತು ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿ ಚಟುವಟಿಕೆ ಆಧಾರಿತವಾಗಿ ಪಾಠ ಮಾಡಲಾಗುತ್ತದೆ. 4ರಿಂದ 9ನೇ ತರಗತಿವರೆಗೆ ಕಲಿಕಾ ಫಲಗಳನ್ನು ಆಧಾರವಾಗಿಟ್ಟು, ಈ ವರ್ಷದ ಪಾಠ ಹಾಗೂ ಅದಕ್ಕೆ ಪೂರಕವಾಗಿರುವ ಹಿಂದಿನ ವರ್ಷಗಳ ಪಾಠ ಹೇಳಿಕೊಡಲಾಗುತ್ತದೆ ಎಂದು ಡಯಟ್ ಪ್ರಾಂಶುಪಾಲೆ ರಾಜಲಕ್ಷ್ಮಿ ತಿಳಿಸಿದರು.

ಕಲಿಕಾ ಹಾಳೆ ಮತ್ತು ಶಿಕ್ಷಕರ ಕೈಪಿಡಿ ರಾಜ್ಯದಿಂದಲೇ ಪೂರೈಕೆಯಾಗುತ್ತದೆ. ಶಾಲೆ ಆರಂಭ ಆಗುವುದರ ಒಳಗಾಗಿ ಇವು ಶಿಕ್ಷಕರ ಕೈ ಸೇರಲಿವೆ ಎಂದರು.

‘ಎಲ್ಲ ಶಿಕ್ಷಕರಿಗೂ ತರಬೇತಿ’

‘ಕಲಿಕಾ ಚೇತರಿಕೆಯ ಇಂಗ್ಲಿಷ್ ಮಾಡ್ಯೂಲ್ ನಮ್ಮ ಜಿಲ್ಲೆಯಲ್ಲಿ ಸಿದ್ಧವಾಗಿದ್ದು, ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳ 201 ಶಿಕ್ಷಕರಿಗೆ ಇಲ್ಲಿ ತರಬೇತಿ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದವರಿಂದ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಶಿಕ್ಷಕರು, ಬ್ಲಾಕ್ ಮಟ್ಟದಲ್ಲಿ ತರಬೇತಿ ನೀಡುತ್ತಾರೆ. ಶೈಕ್ಷಣಿಕ ವರ್ಷ ಆರಂಭವಾಗುವ ಒಳಗಾಗಿ ಎಲ್ಲ ಶಿಕ್ಷಕರಿಗೆ ತರಬೇತಿ ಪೂರ್ಣಗೊಳಿಸಲಾಗುತ್ತದೆ. ಶಾಲಾ ಆರಂಭದಿಂದಲೇ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ’ ಎಂದು ಡಯಟ್ ಪ್ರಾಂಶುಪಾಲೆ ರಾಜಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT