ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಪೆ: ಸಂಭ್ರಮದ ಪೂಕರೆ ಕಂಬಳ

Published 9 ಡಿಸೆಂಬರ್ 2023, 4:46 IST
Last Updated 9 ಡಿಸೆಂಬರ್ 2023, 4:46 IST
ಅಕ್ಷರ ಗಾತ್ರ

ಬಜಪೆ: ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಶ್ರೀದೈವಗಳ ಭಂಡಾರ ಕಾವರಮನೆಯ ಮುಂದಿನ ಗದ್ದೆಯಲ್ಲಿ ಅತೀ ಪುರಾತನವಾದ ಪೂಕರೆ ಕಂಬಳ ನಡೆಯಿತು.

ಪೂರೋಹಿತ ಹರಿದಾಸ ಉಡುಪ ಅವರು ಸೂಚಿಸಿದ ದಿನದಂದು ಪೂಕರೆ ಕಂಬಳ ನಡೆಯುತ್ತದೆ.

ಪೂಕರೆಗೆ ಮೊದಲು ಕಂಬಳದ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ಹದಮಾಡಿ ಇಡಲಾಗುತ್ತದೆ. ಪೂಕರೆ ನಡೆಯುವ ದಿನ ಬೆಳಿಗ್ಗೆ ಗ್ರಾಮಕ್ಕೆ ಸಂಬಂಧಪಟ್ಟ ವಿಶ್ವಕರ್ಮರು ಕಾವೆರ ಮನೆಗೆ ಬಂದು ಒಂದು ಅಡಿಕೆ ಮರವನ್ನು ಕಡಿದು ಅದರಿಂದ ಪೂಕರೆಯನ್ನು ನಿರ್ಮಿಸುತ್ತಾರೆ. ಪೂಕರೆಯ ತುದಿಗೆ ಹಲಸಿನ ಮರದಿಂದ ತಯಾರಿಸಿದ ಶಿಖರ ಇಟ್ಟು, ಕೇಪಳದ ಹೂ ಮತ್ತು ಹಿಂಗಾರದಿಂದ ಅದನ್ನು ಶೃಂಗಾರ ಮಾಡಲಾಗುತ್ತದೆ. ನಾಲ್ಕು ಕಡೆಗಳ ಗುರಿಕಾರರು, ಕ್ಷೇತ್ರಕ್ಕೆ ಸಂಬಂಧಪಟ್ಟವರು ಮತ್ತು ಗ್ರಾಮಸ್ಥರು ಕಾವೆರ ಮನೆಗೆ ಬರುತ್ತಾರೆ. ಬಂದ ಎಲ್ಲಾ ಜನರಿಗೂ ವೀಳ್ಯದೆಲೆ ಮತ್ತು ಅಡಿಕೆ ಕೊಟ್ಟು ಸ್ವಾಗತಿಸಲಾಗುತ್ತದೆ. ದೈವದ ಮುಂದೆ ಎಲ್ಲರೂ ನಿಂತು ಪ್ರಾರ್ಥನೆ ಮಾಡುತ್ತಾರೆ. ನಂತರ ವಾದ್ಯ, ಬ್ಯಾಂಡ್, ಡೋಲು ವಾದನದೊಂದಿಗೆ ಎಲ್ಲಾ ಜಾತಿಯವರು ಸೇರಿ ಪೂಕರೆಯನ್ನು ಹೆಗಲಲ್ಲಿ ಹೊತ್ತಕೊಂಡು ಕಂಬಳದ ಗದ್ದೆಯ  ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಇರುವ ಏಕಶಿಲಾ ದಂಬೆಕಲ್ಲಿಗೆ ಇಟ್ಟು ಪ್ರದಕ್ಷಿಣೆ ಹಾಕುತ್ತಾರೆ. ನಂತರ ಪೂಜೆ ಸಲ್ಲಿಸಿ ಪೂಕರೆಯನ್ನು ನೇರವಾಗಿ ದಂಬೆಕಲ್ಲಿನಲ್ಲಿ ನೆಡಲಾಗುತ್ತದೆ. ನಂತರ ಅತಿಕಾರ ಬಿದೆಯ ನೇಜಿಯನ್ನು ಗದ್ದೆಗೆ ನೆಡಲಾಗುತ್ತದೆ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆಯು ನಡೆಯುತ್ತದೆ.

ಈ ಸಂದರ್ಭ ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ, ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ, ಪ್ರಸನ್ನಮುದ್ದ ನಡ್ಯೋಡಿಗುತ್ತು, ಸಂತೋಷ್ ಭಂಡಾರಿ ಮಿತ್ತೋಟ್ಟು ಬಾಳಿಕೆ ಮೇಲೆಕ್ಕಾರು, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋನಪ್ಪಶೆಟ್ಟಿ ಎಕ್ಕಾರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT