ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ: ಕಂಬಳ ಓಟಗಾರ ಶ್ರೀನಿವಾಸ ಗೌಡರಿಗೆ ಜೀವ ಬೆದರಿಕೆ

Last Updated 16 ಜುಲೈ 2021, 15:04 IST
ಅಕ್ಷರ ಗಾತ್ರ

ಮೂಡುಬಿದಿರೆ: ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ಧಿಯಾದ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್ ಕರೆ ಮಾಡಿ, ಬೆದರಿಕೆ ಹಾಕಿ ನಿಂದಿಸಿದ್ದಾರೆ. ಇದರ ಧ್ವನಿಮುದ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆದರಿಕೆ ಒಡ್ಡಿದ ವ್ಯಕ್ತಿ ಕರೆ ಮಾಡಿ, ‘ನಾನು ಪ್ರಶಾಂತ್ ಬಂಗೇರ, ಶ್ರೀರಾಮ ಸೇನೆಯಲ್ಲಿದ್ದೇನೆ ಎಂದು ಪರಿಚಯಿಸಿಕೊಂಡು ಮಂಗಳೂರು ಕಾರ್ ಸ್ಟ್ರೀಟ್‌ನಲ್ಲಿ ರಿಯಲ್ ಎಸ್ಟೇಟ್ ಕಚೇರಿ ಇದೆ ಅಲ್ಲಿಗೆ ಬನ್ನಿ ಕಂಬಳದ ಇತಿಹಾಸ ತಿಳಿಸುತ್ತೇನೆ’ ಎಂದು ಆಹ್ವಾನಿಸಿದ್ದಾರೆ. ‘ನಾನು ಬರುವುದಿಲ್ಲ, ನೀವು ಒಂಟಿಕಟ್ಟೆಗೆ ಬನ್ನಿ’ ಎಂದು ಶ್ರೀನಿವಾಸ ಗೌಡ ಹೇಳಿದ್ದಾರೆ. ‘ನಾನು ಬರುತ್ತೇನೆ. ಆದರೆ. ನೀನು ಅಲ್ಲಿಗೆ ಬರುವಾಗ ಬೆನ್ನಿಗೆ ಹಾಳೆ ಕಟ್ಟಿಕೊಂಡು ಬಾ. ಜತೆಯಲ್ಲಿ ನಿನ್ನ ಬೆಂಬಲಿಗರನ್ನು ಕರೆದುಕೊಂಡು ಬಾ’ ಎಂದು ಪ್ರಶಾಂತ್ ಗದರಿಸಿದ್ದಾರೆ. ಈ ಮೊಬೈಲ್ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರೋಪಿ ವಿರುದ್ಧ ಶ್ರೀನಿವಾಸ ಗೌಡ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಶುಕ್ರವಾರ ಸಂಜೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶ್ರೀನಿವಾಸ ಗೌಡ ಅಭಿಮಾನಿ ಬಳಗ ಇದೇ 17 ಮಧ್ಯಾಹ್ನ 3 ಗಂಟೆಗೆ ಸಮಾಜ ಮಂದಿರದಲ್ಲಿ ಸಭೆ ಕರೆದಿದ್ದು, ಕಂಬಳ ಯಜಮಾನರು, ಓಟಗಾರರು, ಕಂಬಳಾಭಿಮಾನಿಗಳನ್ನು ಆಹ್ವಾನಿಸಿದೆ.

ಘಟನೆಯನ್ನು ಖಂಡಿಸಿದ ಶಾಸಕ ಉಮಾನಾಥ ಕೋಟ್ಯಾನ್, ಇದು ತುಳುನಾಡಿಗೆ ಆಗಿರುವ ಅವಮಾನ, ಆರೋಪಿ ಪ್ರಶಾಂತ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಕೂಡ ಘಟನೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT