ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ಕನ್ನಡ ಪ್ರೀತಿ ಅನುಕರಣೀಯ: ವಸಂತ ಭಾರದ್ವಾಜ

ಮಂಗಳೂರು ವಿವಿ: ‘ಕನಕ ತತ್ತ್ವಚಿಂತನʼ ಪ್ರಚಾರೋಪನ್ಯಾಸ ಮಾಲಿಕೆಯ ಉದ್ಘಾಟನೆ
Last Updated 18 ನವೆಂಬರ್ 2022, 12:21 IST
ಅಕ್ಷರ ಗಾತ್ರ

ಮುಡಿಪು: ಕನ್ನಡ ಭಾಷೆಯ ಮೇಲೆಕನಕದಾಸರಿಗಿದ್ದ ಪ್ರೀತಿ ಅತ್ಯದ್ಭುತ. ಅವರು ಕಾವ್ಯಗಳಲ್ಲಿ ಉರ್ದು, ಪಾರ್ಸಿ ಹಿಂದಿ ಸೇರಿದಂತೆ ಅನೇಕ ಭಾಷೆಗಳ ಪದಗಳನ್ನು ಬಳಸಿದ್ದಾರೆ. ಸಂಸ್ಕೃತದ ಪದಗಳನ್ನೂ ಕನ್ನಡೀಕರಣಗೊಳಿಸುವ ಪ್ರಯತ್ನಗಳನ್ನೂ ಅವರ ಕಾವ್ಯಗಳಲ್ಲಿ ಕಾಣಬಹುದು. ಹೊಸ ಪದಗಳನ್ನು ಸೃಷ್ಟಿಸಿರುವುದು ಕಾವ್ಯ ಭಾಷೆಯ ಅದ್ಭುತಕ್ಕೆ ಸಾಕ್ಷಿ ಎಂದು ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ವಿವಿಯ ಕನ್ನಡ, ಸಮಾಜಕಾರ್ಯ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲ್ಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ ನಡೆದ ‘ಕನಕ ತತ್ತ್ವಚಿಂತನʼ ಪ್ರಚಾರೋಪನ್ಯಾಸ ಮಾಲಿಕೆಯ ಉದ್ಘಾಟನಾ ಸಮಾರಂಭದಲ್ಲಿ ‘ಕನಕದಾಸರ ನೂತನ ಪದಪ್ರಯೋಗ’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.

ಕನಕದಾಸರ ಪದಪ್ರಯೋಗಗಳು ಅನೇಕ ಚಿಂತನೆಗಳಿಗೆ ಅವಕಾಶ ಮಾಡಿಕೊಡುತ್ತವೆ.‌ ಜನಜೀವನವನ್ನು ಸಮೀಪದಿಂದ ನೋಡಿದ ಅವರಿಗೆ ಗ್ರಾಮೀಣ ಪದ ಬಳಕೆಯ ಜ್ಞಾನ ಅಪಾರವಾಗಿತ್ತು. ಅವರ ಶಬ್ದಮೀಮಾಂಸೆಯನ್ನೇ ಅಧ್ಯಯನ ರೂಪದಲ್ಲಿ ವಿಶ್ಲೇಷಿಸಿದರೆ ಅನೇಕ ಸಂಗತಿಗಳು ಮನವರಿಕೆಯಾಗುತ್ತದೆ ಎಂದು ಭಾರದ್ವಾಜ ಹೇಳಿದರು.

ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಸೋಮಣ್ಣ ಹೊಂಗಳ್ಳಿ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಕನಕಶ್ರೀ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಪ್ರೊ.ಎ.ವಿ.ನಾವಡ, ಉಡುಪಿಯಲ್ಲಿ ಕೃಷ್ಣನಿಗೆ ಇಂದಿಗೂ ರಾಗಿ ಗಂಜಿ ನೈವೇದ್ಯ ಸಮರ್ಪಣೆ ನಡೆಯುತ್ತಿರುವುದು ಸಾಮರಸ್ಯದ ದ್ಯೋತಕ ಎಂದರು.

‘ಕನಕದಾಸರ ಕೀರ್ತನೆಗಳಲ್ಲಿ ವೈದ್ಯಕೀಯ ಅಂಶಗಳು’ ಎಂಬ ವಿಷಯದ ಕುರಿತು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಡಾ. ಬಿ.ಎಸ್. ಅನಿಲ್ ಕುಮಾರ್ ಬೊಮ್ಮಾಘಟ್ಟ ಉಪನ್ಯಾಸ ನೀಡಿದರು. ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಪೌಲ್ ಜಿ.ಅಕ್ವಿನಸ್ ಇದ್ದರು.

ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ‌ದರು. ಆನಂದ ಕಿದೂರು ನಿರೂಪಿಸಿದರು. ಚಂದನಾ ಕೆ.ಎಸ್‌ ವಂದಿಸಿದರು. ಇರಾದ ಕೊಳಲು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕನಕ ಕೀರ್ತನ ಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT