ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಅಧಿಕಾರಿ ಅನುಮಾನಾಸ್ಪದ ಸಾವು

Published 9 ನವೆಂಬರ್ 2023, 14:38 IST
Last Updated 9 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕಿನ ಅಧಿಕಾರಿಯೊಬ್ಬರು ಅನುಮಾನಾಸ್ಪದವಾಗಿ ಸಾವೀಗೀಡಾಗಿದ್ದು, ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

‘ಕರ್ಣಾಟಕ ಬ್ಯಾಂಕಿನ ಚೀಫ್‌ ಕಂಪ್ಲೆಯನ್ಸ್‌ ಅಧಿಕಾರಿ ವಾದಿರಾಜ ಕೆ.ಎ. (51 ವರ್ಷ) ಮೃತರು. ಬೋಂದೆಲ್‌ನ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಅವರು ವಾಸವಿದ್ದು, ಆ ಫ್ಲ್ಯಾಟ್‌ನ ಕೊಠಡಿಯಲ್ಲಿ ಕತ್ತು ಮತ್ತು ಹೊಟ್ಟೆಗೆ ಇರಿದ ಸ್ಥಿತಿಯಲ್ಲಿ ಅವರ ಮೃತದೇಹ ಗುರುವಾರ ಪತ್ತೆಯಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ‌

‘ಕಾರ್ಕಳದವರಾದ ವಾದಿರಾಜ ಅವರು ಆರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಒಂದು ವರ್ಷದಿಂದ ಬೋಂದೆಲ್‌ನ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ವಾದಿರಾಜ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಮಕ್ಕಳು ಕಲಿಯುತ್ತಿದ್ದ ಶಾಲೆಯಲ್ಲಿ ಗುರುವಾರ ಪೋಷಕರ ಸಭೆ ಇತ್ತು. ಅವರ ಪತ್ನಿ ಈ ಸಭೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಅವರೊಬ್ಬರೇ ಇದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಅವರನ್ನು ಕಚೇರಿಗೆ ಕರೆದೊಯ್ಯಲು ಎಂದಿನಂತೆ ಕಾರು ಅವರ ಮನೆಯ ಬಳಿಗೆ ಬಂದಿತ್ತು. ಅವರು ಸುಮಾರು ಹೊತ್ತಾದರೂ ಕಾರಿನ ಬಳಿಗೆ ತೆರಳಿರಲಿಲ್ಲ. ಚಾಲಕ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಹಾಗಾಗಿ ಚಾಲಕ ಮನೆಗೆ ಹೋಗಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅಪಾರ್ಟ್‌ಮೆಂಟ್‌ನಲ್ಲಿದ್ದವರು ಸೇರಿ ಅವರನ್ನು ಎ.ಜೆ.ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಅವರು ಅಸುನೀಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅವರು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT