ಶುಕ್ರವಾರ, ಆಗಸ್ಟ್ 12, 2022
21 °C

ಹೆಣಗಳ ಮೇಲೆ ರಾಜಕಾರಣ ಮಾಡಿದವರು ಯಾರು: ಸಿದ್ದರಾಮಯ್ಯಗೆ ನಳಿನ್‌ಕುಮಾರ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Nalin Kumar Kateel and siddaramaiah

ಮಂಗಳೂರು: ಬಿಜೆಪಿ ವಿರೋಧ ಪಕ್ಷಗಳ ನಾಯಕರ ಚಾರಿತ್ರ್ಯ ಹರಣ ಮಾಡುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌, ‘ಹೆಣಗಳ ಮೇಲೆ ರಾಜಕಾರಣ ಮಾಡಿದ ಬುದ್ಧಿ ಇನ್ಯಾರಿಗೆ ಇರುತ್ತೆ’ ಎಂದು ಪ್ರಶ್ನಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ ಟಿಪ್ಪು ಜಯಂತಿಗೆ ಅನೇಕ ರಾಜಕಾರಣಿಗಳು, ವಿದ್ವಾಂಸರು, ಸಾಹಿತಿಗಳು ಮಾತ್ರವಲ್ಲದೇ ಕೋಟ್ಯಂತರ ಜನರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಹಿಂದೂಗಳನ್ನು ಕೆಣಕಲು, ಅಲ್ಪಸಂಖ್ಯಾತರನ್ನು ಓಲೈಸಲು, ಕನ್ನಡ ಭಾಷೆ ಕಡೆಗಣಿಸಿ ಪರ್ಷಿಯನ್ ಭಾಷೆ ಹೇರಿದ, ಲಕ್ಷಾಂತರ ಜನರ ಹತ್ಯೆಗೈದ, ಮಂದಿರಗಳನ್ನು ಧ್ವಂಸ ಮಾಡಿದ ಮತಾಂಧನ ಜಯಂತಿ ಆಚರಿಸಿದ್ದು ಯಾರು’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಡ್ರಗ್ಸ್‌ ಪ್ರಕರಣ ದುರ್ಬಳಕೆಗೆ ಸರ್ಕಾರದ ಯತ್ನ: ಸಿದ್ದರಾಮಯ್ಯ ಆರೋಪ

‘ಸಿದ್ದರಾಮಯ್ಯ ಅವರೇ, ನಿಮ್ಮ ಅಧಿಕಾರದ ಅವಧಿಯಲ್ಲಿ ಒಂದು ವರ್ಗವನ್ನು ಓಲೈಸಿಕೊಳ್ಳಲು ಹಿಂದೂ ಸಂಘಟನೆಯ ಕಾರ್ಯಕರ್ತರ ರಕ್ತವನ್ನೇ ಹರಿಸಿದ್ದು ನಮಗಿನ್ನೂ ನೆನಪಿದೆ. ಹತ್ತಾರು ಕಾರ್ಯಕರ್ತರ ಹೆಣಗಳ ಮೇಲೆ ರಾಜಕಾರಣ ಮಾಡಿದ ನಿಮ್ಮ ಅಧಿಕಾರದ ಮೋಹ, ಪಕ್ಷದ ದುರಾಡಳಿತ ಇಂದು ನಿಮ್ಮನ್ನು ಪರಿತಪಿಸುವಂತೆ ಮಾಡಿದೆ. ನಿಮ್ಮ ಕರ್ಮವನ್ನು ಮತ್ತೆ ನೆನಪಿಸಿ’ ಎಂದು ಹೇಳಿದ್ದಾರೆ.

‘ಐಎಎಸ್‌ ಅಧಿಕಾರಿ ಡಿ.ಕೆ. ರವಿ, ಡಿವೈಎಸ್ಪಿ ಗಣಪತಿ, ಸಬ್‌ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಬಂಡೆಯಂತಹ ಅತಿದೊಡ್ಡ ಸರ್ಕಾರಿ ಅಧಿಕಾರಿಗಳ ಸಾವುಗಳಿಗೆ ಅಂದಿನ ಸಿದ್ದರಾಮಯ್ಯ ಸರ್ಕಾರ ಕಾರಣವಾಗಿದ್ದು ಮಾತ್ರವಲ್ಲದೆ, ಆ ಅಮೂಲ್ಯ ಜೀವಗಳಿಗೆ ಬೆಲೆ ಇಲ್ಲದಂತಾಗಿತ್ತು. ತಮ್ಮ ಪಕ್ಷದ ಪ್ರಭಾವಿ ನಾಯಕರೇ ಈ ಕೃತ್ಯಗಳಲ್ಲಿ ತೊಡಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ವ್ಯಕ್ತಿ ಯಾವ ಸೀಮೆಯ ನಾಯಕ’ ಎಂದು ಟೀಕಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ, ತನ್ನ ಅಧಿಕಾರದಲ್ಲಿ ಮತಾಂಧ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಗೂಂಡಾಗಳನ್ನು ಜೈಲಿಂದ ಬಿಡುಗಡೆಗೊಳಿಸಿದ ನಂತರ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು ಕಣ್ಣೆದುರೇ ಇದೆ. ಇಂತಹ ಪ್ರಕರಣಗಳ ನಂತರವೂ ಅವರನ್ನು ಬೆಂಬಲಿಸಿದ ಪರಿಣಾಮ ಹತ್ತಾರು ಜೀವಗಳು ಬಲಿಯಾಗಿದೆ. ಹೆಣಗಳ ಮೇಲೆ ರಾಜಕಾರಣ ಮಾಡಿದ ಬುದ್ಧಿ ಇನ್ಯಾರಿಗೆ ಇರುತ್ತೆ?’ ಎಂದು ಕೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು