‘ಸಂಶೋಧನೆಗಳು ತ್ವರಿತವಾಗಿ ರೈತರನ್ನು ತಲುಪಲಿ’

ಮಂಗಳೂರು: ಸಂಶೋಧನಾ ಕೇಂದ್ರಗಳ ಆವಿಷ್ಕಾರಗಳು ದೇಶದಾದ್ಯಂತ ಫಲಾನುಭವಿಗಳನ್ನು ಯಾವುದೇ ವಿಳಂಬವಿಲ್ಲದೇ ತಲುಪುವಂತಾಗಬೇಕು ಎಂದು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸಲಹೆ ನೀಡಿದರು.
ಐಸಿಎಆರ್–ಸಿಪಿಸಿಆರ್‌ಐನ 105 ನೇ ಸಂಸ್ಥಾಪನಾ ದಿನದ ಅಂಗವಾಗಿ ಕಾಸರಗೋಡಿನಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಜೊತೆಗಿನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
₹2 ಸಾವಿರ ಬೆಲೆಯಿದ್ದ ತೆಂಗಿನ ಕಾಯಿ ಸುಲಿಯುವ ಯಂತ್ರವನ್ನು ₹800ಕ್ಕೆ ಒದಗಿಸಲಾಗಿದ್ದು, ಈ ಯಂತ್ರಗಳನ್ನು ರಾಜ್‌ಮೋಹನ್ ಉಣ್ಣಿತ್ತಾನ್ ಬಿಡುಗಡೆ ಮಾಡಿದರು. ಆಕಾಶವಾಣಿ ಕಾರ್ಯಕ್ರಮಗಳ ‘ತೆಂಗಂ ಥನಲಂ’ ಆಡಿಯೊ ಸಿಡಿ, ಸಿಪಿಸಿಆರ್‌ಐನ ಸಂಶೋಧನಾ ಲೇಖನಗಳನ್ನು ಬಿಡುಗಡೆ ಮಾಡಿದ ಅವರು, ಪರಿಶಿಷ್ಟ ಜಾತಿಯ ರೈತರು, ಯುವಕರಿಗೆ ಕೃಷಿ ಸಾಮಗ್ರಿಗಳನ್ನು ವಿತರಿಸಿದರು.
ನವೆದೆಹಲಿಯ ಐಸಿಎಆರ್‌ನ ತೋಟಗಾರಿಕೆ ವಿಜ್ಞಾನದ ಉಪ ಮಹಾರ್ದೇಶಕ ಡಾ.ಎ.ಕೆ. ಸಿಂಗ್ ಮಾತನಾಡಿ, ಸಂಶೋಧನಾ ಕೇಂದ್ರಗಳು ಕೃಷಿಯಲ್ಲಿ ಸುಧಾರಣೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಕೃಷಿಯಲ್ಲಿ ಖಾಸಗಿ ಹೂಡಿಕೆ ಹಾಗೂ ಕೃಷಿ ವಹಿವಾಟಿನ ಕುರಿತು ರೈತರಿಗೆ ಕಾನೂನಾತ್ಮಕ ಹಾಗೂ ರಚನಾತ್ಮಕ ಚೌಕಟ್ಟನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ವೇದಿಕೆಯಲ್ಲಿದ್ದರು. ಮಾಜಿ ನಿರ್ದೇಶಕರಾದ ಡಾ.ಎನ್.ಎಂ. ನಾಯರ್ ಉಪನ್ಯಾಸ ನೀಡಿದರು.
ಅಂತರರಾಷ್ಟ್ರೀಯ ತೆಂಗು ಬೆಳೆಗಾರರ ಕಾರ್ಯಕಾರಿ ನಿರ್ದೇಶಕ ಡಾ.ಜೆಲ್ಫಿನಾ ಸಿ.ಅಲೌವ್, ಕೊಚ್ಚಿನ್‌ನ ಗೇರು ಬೀಜ ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ್ ಎನ್. ಹುಬ್ಬಳ್ಳಿ, ಕೊಯಿಕ್ಕೋಡ್‌ನ ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಹೋಮಿ ಚೆರಿಯನ್, ಐಸಿಎಆರ್‌ನ ಎಡಿಜಿ ಡಾ.ಬಿ.ಕೆ. ಪಾಂಡೆ, ತೆಂಗು ಅಭಿವೃದ್ಧಿ ಮಂಡಳಿಯ ಡಾ.ಸರದಿಂದು ದಾಸ್, ಕಣ್ಣೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಪ್ರಶಾಂತ್ ಪಿ.ವಿ. ಅವರನ್ನು ಸನ್ಮಾನಿಸಲಾಯಿತು.
ಐಸಿಎಆರ್–ಸಿಪಿಸಿಆರ್‌ಐ ನಿರ್ದೇಶಕಿ ಡಾ.ಅನಿತಾ ಕರುಣ್ ಸ್ವಾಗತಿಸಿದರು. ಪ್ರಧಾನ ವಿಜ್ಞಾನಿ ಡಾ.ಸಿ. ತಂಬನ್ ವಂದಿಸಿದರು.
ಪ್ರಶಸ್ತಿ ಪ್ರದಾನ
ಅತ್ಯುತ್ತಮ ವಿಜ್ಞಾನಿಗಳ ತಂಡ ಪ್ರಶಸ್ತಿಯನ್ನು ಡಾ.ಎಂ.ಆರ್.ಮಣಿಕಂಠನ್ ನೇತೃತ್ವದ ಡಾ.ಎ.ಸಿ. ಮ್ಯಾಥ್ಯು, ಡಾ.ಪಿ. ಪಂಡಿಸೆಲ್ವಮ್, ಡಾ.ಶಮೀಮಾ ಬೇಗಂ, ಡಾ.ಎಸ್.ವಿ. ರಮೇಶ್, ಡಾ.ಅರಿವಝಗನ್, ಡಾ.ಕೆ.ಬಿ. ಹೆಬ್ಬಾರ್, ಡಾ.ಮುರಳಿ ಗೋಪಾಲ್, ಡಾ.ಪೌಲರಾಜ್ ಅವರ ತಂಡಕ್ಕೆ ನೀಡಲಾಯಿತು.
ಅತ್ಯುತ್ತಮ ತಾಂತ್ರಿಕ ಸಿಬ್ಬಂದಿ ಪ್ರಶಸ್ತಿಯನ್ನು ಸಿಪಿಸಿಆರ್‌ಐ ಕಾಸರಗೋಡಿನ ಕೆ. ಕೃಷ್ಣನ್ ನಾಯರ್, ವಿಟ್ಲ ಸಿಪಿಸಿಆರ್‌ಐನ ಸಂತೋಷ್‌ಕುಮಾರ್ ಪಿ. ಅವರಿಗೆ ಹಾಗೂ ಅತ್ಯುತ್ತಮ ಕೌಶಲ ಆಧಾರಿತ ಸಿಬ್ಬಂದಿ ಪ್ರಶಸ್ತಿಯನ್ನು ಸಿಪಿಸಿಆರ್‌ಐ ಕಾಸರಗೋಡಿನ ಟಿ.ಜೆ. ನಿನನ್, ವಿಟ್ಲದ ಸುಧಾಕರ್ ಅವರಿಗೆ ನೀಡಲಾಯಿತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.