ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ್ವಾಳ: ನರಿಕೊಂಬು ಸಂಪರ್ಕಕ್ಕೆ ಸೇತುವೆ ಕೊಂಡಿ

ಜಕ್ರಿಬೆಟ್ಟು: ₹ 135 ಕೋಟಿ ವೆಚ್ಚದ ‘ಕಿಂಡಿ ಅಣೆಕಟ್ಟೆ’ ಪೂರ್ಣ
Published 25 ಜೂನ್ 2024, 6:40 IST
Last Updated 25 ಜೂನ್ 2024, 6:40 IST
ಅಕ್ಷರ ಗಾತ್ರ

ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿಗೆ ಸಣ್ಣ ನೀರಾವರಿ ಇಲಾಖೆ ಮೂಲಕ ಇಲ್ಲಿನ ಜಕ್ರಿಬೆಟ್ಟುವಿನಲ್ಲಿ ₹ 135 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟೆ ಮತ್ತು ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ನಿಲ್ಲಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸಯ್ಯದ್ ಅತಿಖುರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯ ಶೆಟ್ಟಿ, ಸಹಾಯಕ ಎಂಜಿನಿಯರ್ ಶಿವಪ್ರಸನ್ನ, ಗುತ್ತಿಗೆದಾರ ರಾಘವೇಂದ್ರ ಕಾರಂತ ಕುಂದಾಪುರ ಅವರ ತಂಡ ಭೇಟಿ ನೀಡಿ ಕಿಂಡಿ ಅಣೆಕಟ್ಟೆಯಲ್ಲಿ ನೀರು ನಿಲುಗಡೆಗೊಳಿಸಿ ಕಾಮಗಾರಿ ಪರಿಶೀಲಿಸಿದರು.

ಈ ಕಿಂಡಿ ಅಣೆಕಟ್ಟೆಗೆ 21 ಗೇಟ್ ಅಳವಡಿಸ ಬಹುದಾಗಿದ್ದು, ಸುಮಾರು 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹಗೊಳಿಸಲು ಅವಕಾಶವಿದೆ. 4.50 ಮೀಟರ್ ನೀರು ಸಂಗ್ರಹಿಸಿ ಪರೀಕ್ಷಿಸಲಾಯಿತು.

2022ರಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಬೇಡಿಕೆಗೆ ಅಂದಿನ ಸಣ್ಣ ನೀರಾವರಿ ಸಚಿವ ಎಚ್.ಸಿ.ಮಾಧುಸ್ವಾಮಿ ಸ್ಪಂದಿಸಿ ಅನುದಾನ ಮಂಜೂರುಗೊಳಿಸಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಅಣೆಕಟ್ಟೆ ನಿರ್ಮಾಣದಿಂದ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಂಗ್ರಹಕ್ಕೆ ಅನುಕೂಲವಾಗಲಿದ್ದು, ಈ ಸೇತುವೆಯು ನರಿಕೊಂಬು ಮತ್ತು ಶಂಭೂರು ಗ್ರಾಮದ ಕೃಷಿಕರಿಗೆ ನೀರಿನ ಒರತೆ ಜತೆಗೆ ಬಂಟ್ವಾಳ ಪೇಟೆಗೆ ಸಂಪರ್ಕಿಸಲು ಅನುಕೂಲಕರವಾಗಿದೆ.

ಒಟ್ಟು 23 ಪಿಲ್ಲರ್ ಹೊಂದಿರುವ ಈ ಸೇತುವೆ 351.25 ಮೀ. ಉದ್ದ ಮತ್ತು 7.5 ಮೀ. ಅಗಲ ಹೊಂದಿದೆ. ಸೇತುವೆ ಮೇಲೆ ವಾಹನ ಸಂಚಾರಕ್ಕೂ ಅನುಕೂಲಕರವಾಗಿದೆ. ಜಕ್ರಿಬೆಟ್ಟುವಿನಲ್ಲಿ 50 ಮೀ. ಮತ್ತು ನರಿಕೊಂಬು ಗ್ರಾಮದಲ್ಲಿ 100 ಮೀ. ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಶಿವಪ್ರಸನ್ನ ತಿಳಿಸಿದ್ದಾರೆ.

ಈ ಅಣೆಕಟ್ಟೆಯಿಂದ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದ್ದು, ನರಿಕೊಂಬು ಮತ್ತು ಶಂಭೂರು ಸಂಪರ್ಕವೂ ಸುಲಭವಾಗಲಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ತಿಳಿಸಿದ್ದಾರೆ.

ಈ ಅಣೆಕಟ್ಟೆ ಪಕ್ಕದಲ್ಲೇ ಹಿಂದೂ ರುದ್ರಭೂಮಿ, ಮೀನು ಮತ್ತು ಮಾಂಸ ಮಾರುಕಟ್ಟೆ ಇದ್ದು, ತ್ಯಾಜ್ಯ ನೀರು ನೇತ್ರಾವತಿ ಒಡಲು ಸೇರುತ್ತಿದೆ ಎಂಬ ಆರೋಪವೂ ನಾಗರಿಕರಿಂದ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT