ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಒಸಿಎಲ್: ಅದಿರು ಗಣಿಗಾರಿಕೆಗೆ ಅನುಮತಿ -ಟಿ. ಸಾಮಿನಾಥನ್

ಬಳ್ಳಾರಿ ಜಿಲ್ಲೆಯ ಸ್ವಾಮಿಮಲೈ ಬ್ಲಾಕ್ ಫಾರೆಸ್ಟ್‌ನಲ್ಲಿ ಗಣಿಗಾರಿಕೆಗೆ ಕೇಂದ್ರದ ಅನುಮೋದನೆ
Last Updated 3 ಫೆಬ್ರುವರಿ 2023, 12:33 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು (ಕೆಐಒಸಿಎಲ್‌) 18 ವರ್ಷಗಳ ನಂತರ ಮತ್ತೆ ಗಣಿಗಾರಿಕೆ ನಡೆಸಲು ಸಿದ್ಧತೆ ನಡೆಸಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕು ಸ್ವಾಮಿಮಲೈ ಬ್ಲಾಕ್ ಫಾರೆಸ್ಟ್‌ನಲ್ಲಿ ದೇವದಾರಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸಲು ಸರ್ಕಾರಿ ಅನುಮತಿ ನೀಡಿದ್ದು, ಇನ್ನು ಒಂದು ವರ್ಷದಲ್ಲಿ ಗಣಿಗಾರಿಕೆ ಆರಂಭವಾಗುವ ನಿರೀಕ್ಷೆಯಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಐಒಸಿಎಲ್ ವ್ಯವಸ್ಥಾಪಕ ನಿರ್ದೇಶಕ ಟಿ. ಸಾಮಿನಾಥನ್, ‘ಕೇಂದ್ರ ಪರಿಸರ ಇಲಾಖೆ ಮತ್ತು ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸ್ವಾಮಿಮಲೈ ಬ್ಲಾಕ್ ಫಾರೆಸ್ಟ್‌ನ 470 ಹೆಕ್ಟೇರ್‌ನಲ್ಲಿ 388 ಹೆಕ್ಟೇರ್ ಅರಣ್ಯ ಭೂಮಿ ತೆರವುಗೊಳಿಸಲು ಅನುಮೋದನೆ ನೀಡಿದೆ. ಕನ್ವೇಯರ್ ಕಾರಿಡಾರ್, ಸಂಪರ್ಕ ರಸ್ತೆ, ವಿದ್ಯುತ್ ಮಾರ್ಗ, ನೀರಿನ ಮಾರ್ಗ ನಿರ್ಮಾಣಕ್ಕೆಂದು 13.57 ಹೆಕ್ಟೇರ್ ಸೇರಿ ಒಟ್ಟು 401.57 ಹೆಕ್ಟೇರ್ ಒಳಗೊಂಡಿದೆ. 50 ವರ್ಷಗಳ ಅವಧಿಗೆ ಗಣಿಗಾರಿಕೆ ನಡೆಸಲು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರೊಂದಿಗೆ ಜನವರಿ 2ರಂದು ಗುತ್ತಿಗೆ ಪತ್ರಕ್ಕೆ ಸಹಿ ಹಾಕಲಾಗಿದೆ. ಈ ಸಂಬಂಧ ಕೆಐಒಸಿಎಲ್ ಸರ್ಕಾರಕ್ಕೆ ₹ 329.17 ಕೋಟಿ ನೋಂದಣಿ ಶುಲ್ಕ ಪಾವತಿಸಿದೆ ಎಂದು ವಿವರಿಸಿದರು.

ಇನ್ನು ಒಂದು ವರ್ಷದಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದು, ಗಣಿಗಾರಿಕೆ ನಡೆಸಲು ಅಗತ್ಯವಿರುವ ಯಂತ್ರೋಪಕರಣ, ರಸ್ತೆ, ಶೆಡ್ ಮೊದಲಾದ ಮೂಲ ಸೌಕರ್ಯ ನಿರ್ಮಾಣ ರೂಪಿಸಿಕೊಂಡು, 2024–25ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಗಣಿಗಾರಿಕೆ ಆರಂಭಿಸುವ ಉದ್ದೇಶವಿದೆ. ಆರಂಭದಲ್ಲಿ 3 ಲಕ್ಷ ಟನ್ ಅದಿರು, 2025-26ರಲ್ಲಿ 5 ಲಕ್ಷ ಟನ್, 2026-27ರಲ್ಲಿ 1 ಮಿಲಿಯನ್ ಟನ್ ಅದಿರು ಹೊರತೆಗೆಯುವ ಗುರಿ ಹೊಂದಲಾಗಿದೆ. ಈ ಕಾರ್ಯ ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿದೆ. ಅದರಿನಿಂದ ಉಂಡೆ (ಪೆಲ್ಲೆಟ್) ತಯಾರಿಸುವ ಕಾರ್ಯ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ರಫ್ತು ಸುಂಕದಿಂದ ನಷ್ಟ: ಕೇಂದ್ರ ಸರ್ಕಾರವು 2022ರ ಮೇ ತಿಂಗಳಲ್ಲಿ ಕಬ್ಬಿಣದ ಉಂಡೆಗಳ ಮೇಲೆ ಶೇ 45ರಷ್ಟು ರಫ್ತು ಸುಂಕ ವಿಧಿಸಿದ್ದರಿಂದ ಕೆಐಒಸಿಎಲ್ ಅದಿರು ಉತ್ಪಾದನೆ ಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಸಂಸ್ಥೆಯ ಲಾಭದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿದ್ದನ್ನು, ಪತ್ರ ಬರೆದು ಕೇಂದ್ರ ಸರ್ಕಾರದ ಗಮನಕ್ಕೆ ತಂದ ಮೇಲೆ ಆರು ತಿಂಗಳುಗಳಲ್ಲಿ ಈ ಸುಂಕವನ್ನು ಹಿಂಪಡೆಯಲಾಯಿತು. ಆದರೆ, ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ಅರ್ಧ ವರ್ಷದಲ್ಲಿ ಕಂಪನಿ ₹ 146 ಕೋಟಿ ನಷ್ಟ ಅನುಭವಿಸಿದೆ ಎಂದು ಸಾಮಿನಾಥನ್ ತಿಳಿಸಿದರು.

ಮಂಗಳೂರಿನ ಊದು ಕುಲುಮೆ (ಬ್ಲಾಸ್ಟ್ ಫರ್ನೇಸ್) ಘಟಕದಲ್ಲಿ ಖನಿಜ ಪರಿಶೋಧನಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದು ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಮ್ಯಾಂಗನೀಸ್, ಬಾಕ್ಸೈಟ್, ಡೊಲೊಮೈಟ್ ಮತ್ತು ಅಲ್ಯುಮಿನೊ ಸಿಲಿಕೇಟ್ ರಿಕ್ರಾಕ್ಟರಿ ವಸ್ತುಗಳ ಪರೀಕ್ಷೆಗೆ ಎನ್‌ಎಬಿಎಲ್ ಮಾನ್ಯತೆ ಪಡೆದುಕೊಂಡಿದೆ. ಖಾಸಗಿ ಗಣಿ ಕಂಪನಿಗಳಿಗೆ ಖನಿಜ ಪರಿಶೋಧನೆ ಸೇವೆಗಳನ್ನು ವಿಸ್ತರಿಸುವ ಪ್ರಕ್ರಿಯೆಯನ್ನು ಕೆಐಒಸಿಎಲ್ ಪ್ರಾರಂಭಿಸಿದೆ ಎಂದರು.

ಮಂಗಳೂರಿನ ಬ್ಲಾಸ್ಟ್ ಫರ್ನೇಸ್ ಘಟಕದಲ್ಲಿ 1.8 ಲಕ್ಷ ಟಿಪಿಎ ಸಾಮರ್ಥ್ಯದ ಕೋಕ್ ಓವನ್ ಪ್ಲಾಂಟ್ ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳು ಪ್ರಗತಿಯಲ್ಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT