ಶನಿವಾರ, ಫೆಬ್ರವರಿ 29, 2020
19 °C
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

ಆಗಸದಲ್ಲಿ ಚಿತ್ತಾರ ಮೂಡಿಸಿದ ಬಾನಾಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರತ್ಕಲ್‌: ವಿವಿಧ ವಿನ್ಯಾಸ, ನಾನಾ ಬಗೆಯ ಚಿತ್ತಾರಗಳೊಂದಿಗೆ ಪಣಂಬೂರು ಬೀಚ್‌ನ ಆಗಸದಲ್ಲಿ ಆಕರ್ಷಕ ಗಾಳಿ ಪಟ ಉತ್ಸವ ಶುಕ್ರವಾರ ಆರಂಭವಾಯಿತು.

ಕರಾವಳಿ ಉತ್ಸವದ ಅಂಗವಾಗಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಒಟ್ಟು 21 ಸ್ಪರ್ಧಿಗಳು ಭಾಗವಹಿಸಿದ್ದು, ಈ ಪೈಕಿ 12 ಜನರು ವಿದೇಶಿ ಅತಿಥಿಗಳು ಪಾಲ್ಗೊಂಡಿರುವುದು ವಿಶೇಷವಾಗಿದೆ.

ಸೂಪರ್‌ ಹೀರೋಗಳು, ವಿವಿಧ ಪ್ರಾಣಿಗಳು, ಪಕ್ಷಿಗಳು, ಸರಿಸೃಪಗಳು, ಕಾಲ್ಪನಿಕ ಚಿತ್ರಗಳು, ಜಾನಪದ ಕಲಾಕೃತಿಗಳನ್ನು ಒಳಗೊಂಡ ವಿವಿಧ ರೀತಿಯ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಹನುಮಂತನ ಕಲಾಕೃತಿಯ ಗಾಳಿಪಟವೊಂದು ಆಕಾಶದಲ್ಲಿ ಹಾರುವ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು.

ಪಣಂಬೂರು ಬೀಚ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯತೀಶ್ ಬೈಕಂಪಾಡಿ ಮಾತನಾಡಿ, ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವವು ಏಕತೆ ಮತ್ತು ಸಮಗ್ರತೆಯ ಸಂಕೇತವಾಗಿದೆ. ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, ದೇಶ–ವಿದೇಶಿ ಗಾಳಿಪಟ ಹಾರಾಟಗಾರರನ್ನು ಒಂದೇ ವೇದಿಕೆಗೆ ತರುವುದು ಈ ಉತ್ಸವದ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಇದರ ಜತೆಗೆ ಪ್ರವಾಸೋದ್ಯಮದ ಉತ್ತೇಜನಕ್ಕೂ ವೇದಿಕೆ ಸಿಕ್ಕಂತಾಗಿದೆ. ವಿದೇಶಿ ಪ್ರತಿನಿಧಿಗಳು ಪಾಲ್ಗೊಂಡಿರುವುದರಿಂದ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡಿದಂತಾಗಲಿದೆ ಎಂದರು.

ಇದು ಕೇವಲ ಉತ್ಸವವಾಗಿದ್ದು, ಸ್ಪರ್ಧೆಯಲ್ಲ. ಅದಾಗ್ಯೂ ಹಲವಾರು ಜನರು ತಮ್ಮ ಕುಟುಂಬದ ಸದಸ್ಯರ ಸಮೇತ ಉತ್ಸವದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ. ಎರಡನೇ ಬಾರಿಗೆ ನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ನಡೆಯುವ ಗಾಳಿಪಟಗಳ ಹಾರಾಟ ಮತ್ತಷ್ಟು ಮೆರುಗು ನೀಡಲಿದೆ ಎಂದು ಹೇಳಿದರು.

ಗಾಳಿಪಟ ದಂಪತಿ ಎಂದೇ ಹೆಸರಾಗಿರುವ ಅಮೆರಿಕದ ರಾನ್‌ ಸ್ಪಾಲ್ಡಿಂಗ್‌ ಹಾಗೂ ಅವರ ಪತ್ನಿ ಥೈಲ್ಯಾಂಡ್‌ನ ಬ್ಯೂ ಸ್ಪಾಲ್ಡಿಂಗ್‌ ಅವರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದು, ‘ನಾವು ವಿವಿಧ ದೇಶಗಳಲ್ಲಿ ನಡೆಯುವ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಂಡಿದ್ದೇವೆ. ಮಂಗಳೂರಿನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಎರಡನೇ ಬಾರಿಗೆ ಪಾಲ್ಗೊಂಡಿರುವುದು ಸಂತಸ ತಂದಿದೆ’ ಎಂದು ತಿಳಿಸಿದರು.

ನಗರದಲ್ಲಿ 2007ರಿಂದ ನಡೆಯುವ ಪ್ರತಿಯೊಂದು ಗಾಳಿಪಟ ಉತ್ಸವದಲ್ಲಿ ನಮ್ಮ ತಂಡ ಭಾಗವಹಿಸುತ್ತ ಬಂದಿದೆ ಎಂದು ಟೀಂ ಮಂಗಳೂರಿನ ಸದಸ್ಯ ಗಿರಿಧರ್ ಕಾಮತ್ ತಿಳಿಸಿದರು. ಎನ್ಎಂಪಿಟಿ ಅಧ್ಯಕ್ಷ ಎ.ವಿ. ರಮಣ್‌, ಉತ್ಸವವನ್ನು ಉದ್ಘಾಟಿಸಿದರು. ಶಾಸಕ ಡಾ.ವೈ.ಭರತ್‌ ಶೆಟ್ಟಿ, ಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯಕ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು