ಬುಧವಾರ, ಏಪ್ರಿಲ್ 8, 2020
19 °C
ರಾಜ್ಯ ಕೊಂಕಣಿ ಅಕಾಡೆಮಿ ರಜತ ಮಹೋತ್ಸವಕ್ಕೆ ಸಚಿವ ಸಿ.ಟಿ. ರವಿ ಚಾಲನೆ

ಭಾಷೆ ಉಳಿಸಿಕೊಳ್ಳುವುದು ಸವಾಲಿನ ಸಂಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಇಂದು ಭಾಷೆ ಉಳಿಸಿಕೊಳ್ಳುವುದು ಒಂದು ಸವಾಲಿನ ಸಂಗತಿಯಾಗಿದೆ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಇಲ್ಲಿನ ಎಸ್‌ವಿಟಿ ವಿದ್ಯಾ ಸಂಸ್ಥೆಯ ವಠಾರದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯ ಕೊಂಕಣಿ ಅಕಾಡೆಮಿ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಭಾಷೆಯ ಮೇಲೆ ನಮಗಿರುವ ನಿರಭಿಮಾನ ಹಾಗೂ ಇಂಗ್ಲಿಷ್ ಭಾಷೆಯಿಂದಾಗಿ ಪ್ರಾದೇಶಿಕ ಭಾಷೆ ಸೊರಗಿದೆ. ಮೂರು ಸಹಸ್ರಕ್ಕೂ ಮಿಕ್ಕಿ ಭಾಷೆಗಳಿದ್ದರೂ, 1200 ಭಾಷೆಗಳು ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ. ವ್ಯವಹಾರ ಭಾಷೆ ಇಂಗ್ಲಿಷ್‌ಅನ್ನು ಕಲಿಯುವುದು ತಪ್ಪಲ್ಲ ಎಂದು ಅವರು ಹೇಳಿದರು.

ನಮ್ಮ ಸಂಹವನದ ಪ್ರತೀಕವಾದ ಭಾಷೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ಪ್ರಾದೇಶಿಕ ಭಾಷೆಗಳು ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತಿವೆ. ಕೊಂಕಣಿ ಬೆಳೆಸಲು ಕನ್ನಡ ಹಾಗೂ ಇತರ ಭಾಷೆಗಳು ಸಹಕರಿಸುತ್ತಾ ಬಂದಿವೆ. ಆದರೆ ಇಂಗ್ಲಿಷ್ ಭಾಷೆ ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜಗತ್ತಿನ ಇತಿಹಾಸದಲ್ಲಿ ಪ್ರತಿಷ್ಠೆಗಾಗಿ, ಹೆಣ್ಣಿಗಾಗಿ, ಸೇಡಿಗಾಗಿ, ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧ ನಡೆದಿದೆ. ಆದರೆ ಭಾಷೆಗಾಗಿ ಯುದ್ಧ ನಡೆದಿಲ್ಲ. ಆದರೆ ಇಂದು ಭಾಷೆಯ ಜತೆಗೆ ನಮ್ಮ ನಡವಳಿಕೆಗಳೂ ಬದಲಾಗುತ್ತಿವೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಮತ್ತೊಂದು ದಿನ ಕೊಂಕಣಿ, ತೆಲುಗು, ಮರಾಠಿ ಶಾಲೆಗಳಿಗೂ ಇದೇ ಸ್ಥಿತಿ ಬಾರದೇ ಇರುವುದಿಲ್ಲ. ಭಾಷೆಯ ಹೆಸರಿನಲ್ಲಿ ಎತ್ತಿಕಟ್ಟುವ, ಪ್ರಾದೇಶಿಕ ಭಾಷೆಗಳಿಗೆ ಕೊಡಲಿ ಏಟು ನೀಡುವುದು ಸರಿಯಾದ ಕ್ರಮವಲ್ಲ. ಜಾತಿ ತಪ್ಪಲ್ಲ, ಜಾತೀಯತೆ ತಪ್ಪು. ಸಿಎಎ ವಿರೋಧಿಸಿ ಅಲ್ಲಲ್ಲಿ ಪ್ರತಿಭಟನೆ ನಡೆಯತ್ತಿವೆ. ಇದನ್ನು ಅರ್ಥೈಸಿಕೊಳ್ಳದೇ ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿದರು. 

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಾಮತ್ ಮಾತನಾಡಿದರು. ಅತ್ತೂರು ಬೆಸಿಲಿಕಾದ ಧರ್ಮಗುರು ರೆ.ಫಾ. ಜಾರ್ಜ್ ಡಿಸೋಜ ಆಶೀರ್ವಚನ ನೀಡಿದರು.

ಸಮ್ಮೇಳನಾಧ್ಯಕ್ಷ ಕೊಂಕಣಿ ಸಾಹಿತಿ ಗೋಕುಲದಾಸ ಪ್ರಭು ಮಾತನಾಡಿ, ಕೊಂಕಣಿ ಭಾಷೆ ನಶಿಸುವ ಭಾಷೆಯಲ್ಲ. ಕೊಂಕಣಿ ಭಾಷೆ ಎಲ್ಲೆಲ್ಲಿ ಇದೆಯೋ ಅಲ್ಲಲ್ಲಿ ದೃಷ್ಟಿ ಹಾಯಿಸುವ ಕೆಲಸ ಕಾರ್ಯಗಳು ನಡೆಯಬೇಕು. ಪ್ರದೇಶಕ್ಕೆ ಅನುಗುಣವಾಗಿ ಭಾಷೆಯ ಭಿನ್ನತೆ ಕಂಡು ಬಂದರೂ, ಕೊಂಕಣಿ ಭಾಷಿಕರೆಲ್ಲರೂ ಒಂದೇ. ಕೊಂಕಣಿ ಭಾಷೆಯ ಮೂಲಕ ಸಂಸ್ಕೃತಿ, ಕಲೆ, ಸಂಸ್ಕಾರ ಬೆಳೆಯುತ್ತಿದೆ. ಕೊಂಕಣಿಗರ ಪ್ರತಿಭೆ ಇತರರನ್ನು ಅಕರ್ಷಿಸಿದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿ. ಸುನಿಲ್ ಕುಮಾರ್, ಬೆಳ್ಳಿ ಹಬ್ಬ ಸಮಿತಿ ಗೌರವಾಧ್ಯಕ್ಷೆ ಸಂಧ್ಯಾ ಪೈ, ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕುಮಾರ ಬಾಬು ಬೆಕ್ಕೇರಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 25 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಯೋಗೀಶ್ ಕಿಣಿ ನಾಡಗೀತೆ ಹಾಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ರಾಜೇಂದ್ರ ಭಟ್ ನಿರೂಪಿಸಿದರು. ಬೆಳ್ಳಿ ಹಬ್ಬದ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶೆಣೈ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು