ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಜಿಟಲ್ ವೇದಿಕೆಗೆ ಕೊರಗ ಭಾಷೆಯ ಹಾಡು

ಹೆಣ್ಣುಮಗು ಸಂಸಾರಕ್ಕೆ ಆಧಾರ ಎಂಬ ಸಾರ; ‘ಕೂಜಿನ ಪಾಟು’ ಯುಟ್ಯೂಬ್‌ಗೆ ಲಗ್ಗೆ
Published : 23 ಸೆಪ್ಟೆಂಬರ್ 2024, 19:13 IST
Last Updated : 23 ಸೆಪ್ಟೆಂಬರ್ 2024, 19:13 IST
ಫಾಲೋ ಮಾಡಿ
Comments

ಮಂಗಳೂರು: ಕೊರಗ ಭಾಷೆಯ ಹಾಡೊಂದು ಆನ್‌ಲೈನ್ ವೇದಿಕೆಗೆ ಪ್ರವೇಶ ಪಡೆಯಲು ಸಜ್ಜಾಗಿದೆ. ಹೆಣ್ಣು ಮಗುವಿನ ಜನನ ಮತ್ತು ಬೆಳವಣಿಗೆಗೆ ಸಂಬಂಧಿಸಿದ ‘ಕೂಜಿನ ಪಾಟು’ ಎಂಬ ಕವಿತೆಯನ್ನು ಬೆಂಗಳೂರಿನ ಐಲೇಸಾ–ದಿ ವಾಯ್ಸ್ ಆಫ್ ಓಷನ್‌ ಸಂಸ್ಥೆ ಸಂಗೀತ ಮತ್ತು ನೃತ್ಯಕ್ಕೆ ಅಳವಡಿಸಿದ್ದು ಇದೇ 28ರಿಂದ ಯುಟ್ಯೂಬ್‌ನಲ್ಲಿ ಲಭ್ಯವಾಗಲಿದೆ.

ಪಾಂಗಳ ಬಾಬು ಕೊರಗ ಅವರ ‘ಕೊರಗರ ಭಾಷೆ–ಒಂದು ಪರಿಚಯ’ ಕೃತಿಯಲ್ಲಿರುವ ಮೂರು ಕವಿತೆಗಳ ಪೈಕಿ ಒಂದನ್ನು ಆರಿಸಿಕೊಂಡ ಐಲೇಸಾ ಸಂಸ್ಥೆಗಾಗಿ ವಕೀಲ ಕಿಶೋರ್ ಶೆಟ್ಟಿ ಈ ಹಾಡು–ನೃತ್ಯವನ್ನು ನಿರ್ಮಾಣ ಮಾಡಿದ್ದಾರೆ. ವಿ.ಮನೋಹರ್ ರಾಗಸಂಯೋಜನೆ ಮಾಡಿರುವ ಕವಿತೆಯನ್ನು ಚೇತನ್ ಖುಷಿ ಮತ್ತು ಸಂಗಡಿಗರು ಹಾಡಿದ್ದಾರೆ.

5 ನಿಮಿಷ 44 ಸೆಕೆಂಡುಗಳ ಹಾಡಿನಲ್ಲಿ ಪೂರ್ತಿ ಬುಡಕಟ್ಟು ಜನಾಂಗದ ಸಂಗೀತವನ್ನು ಬಳಸಲಾಗಿದೆ. ಸಂಗಡಿಗರು ಹಾಡುವ ಲೇಲೆಗಾ ಲೇಲೆಗಾ ಎಂಬ ನಿರಂತರ ಆಲಾಪದ ಹಿನ್ನೆಲೆಯಲ್ಲಿ ತಾರಕ ಸ್ವರದಲ್ಲಿ ಚೇತನ್ ಹಾಡಿದ್ದಾರೆ. ಕೊರಗ ಸಮುದಾಯದವರೇ ಮಾಡಿರುವ ನೃತ್ಯವಿದೆ. 

‘ಕೊರಗ ಸಮುದಾಯದವರು ಹುಣ್ಣಿಮೆಯ ದಿನ ಸಂಭ್ರಮಗೊಂಡು ಮನರಂಜನೆಗಾಗಿ ‘ಲೇಲೆಗಾ...’ ಎಂಬ ಆಲಾಪವನ್ನು ಒಳಗೊಂಡ ಹಾಡುಗಳನ್ನು ಹಾಡುತ್ತಾರೆ. ‘ಲೇಲೆಗಾ’ವನ್ನು ಬಳಸಿಕೊಂಡು ತುಳುವಿನಲ್ಲಿ ಅನೇಕ ಹಾಡುಗಳು ಸಿದ್ಧಗೊಂಡಿವೆ. ಕೊರಗ ಭಾಷೆಯಲ್ಲಿ ಪೂರ್ಣಪ್ರಮಾಣದ ಹಾಡು ಇದೇ ಮೊದಲ ಬಾರಿ ತಯಾರಾಗಿದೆ’ ಎಂದು ಐಲೇಸಾದ ಸಂಚಾಲಕ ಶಾಂತಾರಾಮ ವಿ.ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಣ್ಣುಮಗು ಸಂಸಾರಕ್ಕೆ ಆಧಾರ ಎಂದು ನಂಬಿದವರು ಬುಡಕಟ್ಟು ಜನಾಂಗದವರು. ಅಪ್ಪೆ ಮೂಲ ತೆಗುಲುಗತ/ನಮ್ಮ ಬಲೆಪುಡು/ಕೇಪುಲ ಪೂ ಅರಲುಗತ/ಕೊಪ್ಪ ದ ಜಾಲುಟ್/ಸಂಪು ಗಾಲಿ ಬೀಜಿಗತ/ನಮ್ಮ ಕೂಟಡ್/ಪೊನ್ನ ಕೊಡಿ ಒರಿಪುಗತ/ಅಪ್ಪೆ ಕುಟುಮನ್ ಎಂದು ಸಾಗುವ ಈ ಹಾಡು ಅದೇ ಸಾರವನ್ನು ಹೊಂದಿದೆ. ಕಾರ್ಕಳದ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ‘ಕೊರಗ ಧ್ವನಿ ಅನಾವರಣ’ ಎಂಬ ಆಶಯದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಲಿದೆ. ಕರೋಕೆ ಹಾಡುವ ಆಸಕ್ತರಿಗೆ ಇದರ ಮೈನಸ್ ಟ್ರ್ಯಾಕ್  ಲಭ್ಯವಿರುತ್ತದೆ’ ಎಂದು ಶಾಂತಾರಾಮ ವಿ.ಶೆಟ್ಟಿ ವಿವರಿಸಿದರು.

‘ತುಳು ಸೇರಿದಂತೆ ಕರಾವಳಿಯ ಒಂಬತ್ತು ಭಾಷೆಗಳ ಹಾಡುಗಳನ್ನು ಐಲೇಸಾ ಸಿದ್ಧಪಡಿಸಿದ್ದು ಸಂಸ್ಥೆಯ ಯುಟ್ಯೂಬ್ ಚಾನಲ್‌ನಲ್ಲಿ ಅವು ಲಭ್ಯವಿವೆ. ಕೊರಗ ಭಾಷೆಯ ಹಾಡೊಂದನ್ನು ಸಿದ್ಧಪಡಿಸಿದ್ದರ ಹಿಂದೆ ಆ ಜನಾಂಗದ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಬೇಕೆಂಬ ಅದಮ್ಯ ಅಭಿಲಾಷೆಯೂ ಇದೆ’ ಎಂದು ಅವರು ಹೇಳಿದರು.

ಬಾಬು ಕೊರಗ
ಬಾಬು ಕೊರಗ
ಶಾಂತಾರಾಮ ಶೆಟ್ಟಿ
ಶಾಂತಾರಾಮ ಶೆಟ್ಟಿ

Quote - ನಾನು ಬರೆದ ಹಾಡೊಂದು ಕೊರಗ ಭಾಷೆಯ ಮೊದಲ ಹಾಡಾಗಿ ಆನ್‌ಲೈನ್‌ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದು ಭಾಷೆಯ ಬೆಳವಣಿಗೆಗೆ ನೆರವಾಗಲಿದೆ ಎಂಬ ಭರವಸೆ ಇದೆ. ಬಾಬು ಕೊರಗ ಗೀತ ರಚನೆಕಾರ

Quote - ಹಾಡಿನ ಸಂಗೀತ ಸಂಯೋಜನೆ ತಿಂಗಳ ಹಿಂದೆ ಆರಂಭವಾಗಿತ್ತು. ತುಳು ದಿನ ಮತ್ತು ಅಮೃತ ಸೋಮೇಶ್ವರರು ಜನಿಸಿದ ದಿನದ ನೆನಪಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು. –ಶಾಂತಾರಾಮ ವಿ.ಶೆಟ್ಟಿ ಐಲೇಸಾ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT