ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಪರೀಕ್ಷೆ | ತಪಾಸಣೆಗೆ ವಿದ್ಯಾರ್ಥಿಗಳ ಬಳಕೆ: ಆಕ್ಷೇಪ

ಕಿರಿಯ ಲೆಕ್ಕ ಸಹಾಯಕ ಹುದ್ದೆ ಭರ್ತಿಗೆ ಕೆಪಿಎಸ್‌ಸಿ ಪರೀಕ್ಷೆ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಮಂಗಳೂರು: ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಗ್ರೂಪ್ ಸಿ ವೃಂದದ ಕಿರಿಯ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, ನಗರದ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳನ್ನು ವಿದ್ಯಾರ್ಥಿಗಳಿಂದಲೇ ತಪಾಸಣೆ ನಡೆಸಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ನಗರದಲ್ಲಿ ಬಲ್ಮಠದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವಿತ್ತು. ‘ಇಲ್ಲಿ ತಪಾಸಣೆಯನ್ನು ಕ್ರಮಬದ್ಧವಾಗಿ ನಡೆಸಿಲ್ಲ. ಸಿಬ್ಬಂದಿಗೆ ಲೋಹಶೋಧಕ ಬಳಸಿ ತಪಾಸಣೆ ನಡೆಸಲೂ ಬರುತ್ತಿರಲಿಲ್ಲ. ಕೆಲವು ಯಂತ್ರಗಳೂ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ’ ಎಂದೂ ಕೆಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಈ ಕುರಿತು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘವು (ಎಕೆಎಸ್ಎಸ್‌ಎ) ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿರುವ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಮಂಗಳೂರಿನ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಅಭ್ಯರ್ಥಿಗಳನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ’ ಎಂದು ಟೀಕಿಸಿದೆ. ಅಭ್ಯರ್ಥಿಗಳನ್ನು ತಪಾಸಣೆ ನಡೆಸುವ ಛಾಯಾಚಿತ್ರಗಳನ್ನೂ ಸಂಘಟನೆಯು ಹಂಚಿಕೊಂಡಿದೆ. ಈ ಚಿತ್ರವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಪರೀಕ್ಷೆ ನಡೆಸುವ ಹೊಣೆ ಹೊತ್ತಿದ್ದ ಅಧಿಕಾರಿಯೊಬ್ಬರು ಈ ಆಕ್ಷೇಪದ ಕುರಿತು ಪ್ರತಿಕ್ರಿಯಿಸಿ, ‘ಕೆಪಿಎಸ್ಸಿಯು ಪರೀಕ್ಷೆ ನಡೆಸುವುದಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವ ಕಾರ್ಯವನ್ನು ಟೆಂಡರ್‌ ಕರೆದು ಹೊರಗುತ್ತಿಗೆ ನೀಡಿತ್ತು. ಅಭ್ಯರ್ಥಿಗಳ ತಪಾಸಣೆ ನಡೆಸಲು ಬಳಸಿರುವ ಸಿಬ್ಬಂದಿ ಈ ಕೆಲಸದ ಗುತ್ತಿಗೆ ಪಡೆದ ಏಜೆನ್ಸಿಯವರು ಪೂರೈಸಿದ್ದಾರೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಎಸ್ಸಿ ಅಧಿಕಾರಿಯೊಬ್ಬರು, ‘ಇಂತಹ ಕೆಲಸಗಳಿಗೆ ಪದವೀಧರ (ಎಂಜಿನಿಯರಿಂಗ್‌ ಪದವಿ ಹೊಂದಿದ) ಸಿಬ್ಬಂದಿ ಸಿಗುವುದಿಲ್ಲ. ಇದು ತಾಂತ್ರಿಕೇತರ ಕೆಲಸವಾಗಿರುವುದರಿಂದ ಯಾವುದೇ ತಾಂತ್ರಿಕ ಜ್ಞಾನ ಇಲ್ಲದ ಸಾಮಾನ್ಯ ವ್ಯಕ್ತಿಯೂ ಕನಿಷ್ಠ ತರಬೇತಿ ಪಡೆದು ಈ ಕೆಲಸ ನಿರ್ವಹಿಸಬಹುದು. ಹೀಗಾಗಿ ಇಲ್ಲಿ ನಿಯಮದ ಉಲ್ಲಂಘನೆ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಅಭ್ಯರ್ಥಿಗಳನ್ನು ತಪಾಸಣೆ ನಡೆಸಿರುವ ಸಿಬ್ಬಂದಿ ಎಸ್ಸೆಸ್ಸೆಲ್ಸಿ ಅಥವಾ ಪಿ.ಯು.ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು. ಅವರು ರಜಾದಿನಗಳಲ್ಲಿ ಅರೆಕಾಲಿಕ ನೆಲೆಯಲ್ಲಿ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂದು ಟೆಂಡರ್‌ ಕಾರ್ಯಾದೇಶ ಪಡೆದ ಸಂಸ್ಥೆಯವರು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT