ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ರೈಲು ಹಳಿ ಮೇಲೆ ಕುಸಿದ ಮಣ್ಣು ತೆರವು ಕಾರ್ಯ ಆರಂಭ, ಸಂಚಾರ ಸ್ಥಗಿತ

Last Updated 16 ಜುಲೈ 2021, 12:17 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹೊರವಲಯದ ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ಕುಸಿದಿರುವ ಮಣ್ಣು ತೆರವು ಕಾರ್ಯಾಚರಣೆ ಆರಂಭವಾಗಿದೆ. ಮಣ್ಣು ಕುಸಿಯದಂತೆ ನಿರ್ಮಿಸಿದ್ದ ತಡೆಗೋಡೆಯೊಂದಿಗೆ ಭಾರಿ ಪ್ರಮಾಣದ ಮಣ್ಣು ರೈಲು ಮಾರ್ಗದಲ್ಲಿ ಬಿದ್ದಿದ್ದು, ಕೊಂಕಣ ರೈಲು ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ.

ಮಂಗಳೂರು ಜಂಕ್ಷನ್‌–ತೋಕೂರು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಮಂಗಳೂರು ಮೂಲಕ ಕೊಂಕಣ ರೈಲು ಸಂಪರ್ಕಿಸುವ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಮುಂಬೈಯಿಂದ ಮಂಗಳೂರಿಗೆ ಬರುವ ರೈಲುಗಳು ತೋಕೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಿದ್ದು, ಅಲ್ಲಿಂದಲೇ ಮರಳಿ ಮುಂಬೈಗೆ ಪ್ರಯಾಣಿಸಿವೆ. ಮುಂಬೈಗೆ ತೆರಳುವ ಮತ್ಸ್ಯಗಂಧಾ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ರೈಲ್ವೆ ನಿಲ್ದಾಣದಲ್ಲಿಯೇ ನಿಲುಗಡೆ ಮಾಡಲಾಗಿದೆ.

ಪಾಲಕ್ಕಾಡ್‌ ವಿಭಾಗಕ್ಕೆ ಸೇರಿದ ಕುಲಶೇಖರ ಸುರಂಗ ಮಾರ್ಗ ಸಮೀಪ ತಡೆಗೋಡೆ ಕುಸಿದಿದೆ. ಎರಡು ವರ್ಷದ ಹಿಂದೆಯೂ ಇದೇ ಜಾಗದಲ್ಲಿ ಮಣ್ಣು ಕುಸಿದು ಎರಡು ದಿನ ರೈಲು ಸಂಚಾರ ಸ್ಥಗಿತವಾಗಿತ್ತು. ಬಳಿಕ ಮಣ್ಣು ಕುಸಿಯುವ ಜಾಗದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಡೆಗೋಡೆಯಲ್ಲಿ ಬಿರುಕು ಬಿಟ್ಟು, ಹಳಿ ಮೇಲೆ ಬಿದ್ದಿದೆ. ಸ್ಥಳಕ್ಕೆ ಪಾಲಕ್ಕಾಡ್‌ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿಯಲ್ಲಿ ಬಿದ್ದಿರುವ ಕಲ್ಲು– ಮಣ್ಣು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿಯೇ ರೈಲುಗಳ ಓಡಾಟ ಆರಂಭಿಸಲಾಗುವುದು ಎಂದು ಎಂದು ತಿಳಿಸಿದ್ದಾರೆ.

ರೈಲು ಸಂಚಾರ ಸ್ಥಗಿತ: ಮಂಗಳೂರು ಸೆಂಟ್ರಲ್‌–ಲೋಕಮಾನ್ಯ ತಿಲಕ (ರೈ.ಸಂ. 02620) ಮತ್ಸ್ಯಗಂಧಾ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.

ಮುಂಬೈ ಸಿಎಸ್‌ಎಂಟಿ–ಮಂಗಳೂರು ಜಂಕ್ಷನ್‌ (ರೈ.ಸಂ. 01133) ಎಕ್ಸ್‌ಪ್ರೆಸ್‌ ವಿಶೇಷ ರೈಲು ಸುರತ್ಕಲ್‌ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಮಂಗಳೂರು ಜಂಕ್ಷನ್‌–ಮುಂಬೈ ಸಿಎಂಎಸ್‌ಟಿ (ರೈ.ಸಂ. 01134) ರೈಲು, ಶುಕ್ರವಾರ ಸಂಜೆ 5.18ಕ್ಕೆ ಮಂಗಳೂರು ಜಂಕ್ಷನ್‌ ಬದಲು ಸುರತ್ಕಲ್‌ ನಿಲ್ದಾಣದಿಂದ ಹೊರಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT