ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಪಾರು ಆದೇಶ: ಕಾನೂನು ಹೋರಾಟ– ಹಿಂಜಾವೇ

Published 30 ಏಪ್ರಿಲ್ 2024, 5:13 IST
Last Updated 30 ಏಪ್ರಿಲ್ 2024, 5:13 IST
ಅಕ್ಷರ ಗಾತ್ರ

ಮಂಗಳೂರು: ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮೂಲಭೂತ ಹಕ್ಕು ಹರಣ ಮಾಡಿ, ಗಡಿಪಾರು ಮಾಡಿರುವ ಜಿಲ್ಲಾಡಳಿತದ ಆದೇಶ ಪ್ರಶ್ನಿಸಿ, ಕಾನೂನು ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಮಹೇಶ್ ಕಡಗದಾರು ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ವಿರೋಧಿ ನೀತಿಯನ್ನು ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸಿದರೆ, ಆಡಳಿತ ಯಂತ್ರವನ್ನು ಬಳಸಿಕೊಂಡು ಹಿಂದೂ ಕಾರ್ಯಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಪುತ್ತೂರಿನ ದಿನೇಶ್ ಪಂಜಿಗ, ಯಶೋಧರ ಬಳಾಲು, ಅವಿನಾಶ್ ಪುರುಷರ ಕಟ್ಟೆ, ಪ್ರವೇಶ್ ಹಾಗೂ ಅಕ್ಷಯ್ ರಜಪೂತ್ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ’ ಎಂದರು.

ವೇದಿಕೆಯು 40 ವರ್ಷಗಳ ಹೋರಾಟದಲ್ಲಿ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣ, ಮಾನಸಿಕ ಹಿಂಸೆ ಮೆಟ್ಟಿನಿಂತು ಕಾರ್ಯಕರ್ತರನ್ನು ರಕ್ಷಿಸಿರುವ ಸಂಘಟನೆಯಾಗಿದೆ. ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಜಿಲ್ಲಾಡಳಿತ ಕ್ರಮವನ್ನು ಜನರ ಮುಂದೆ ಇಟ್ಟು ಆಂದೋಲನ ನಡೆಸಲಾಗುವುದು. ಗಡಿಪಾರು ಮಾಡಿದವರಿಗೆ, ಅಲ್ಲಿ ಮೂಲ ಅಗತ್ಯವನ್ನು ಇಲಾಖೆ ಪೂರೈಸುತ್ತದೆಯೇ ಎಂಬುದನ್ನು ತಿಳಿಸಬೇಕು. ಉತ್ತರ ಕರ್ನಾಟಕದ ಪ್ರಕರಣವೊಂದರಲ್ಲಿ ನ್ಯಾಯಾಲಯವೂ ಈ ಪ್ರಶ್ನೆಯನ್ನು ಮುಂದಿಟ್ಟಿದೆ ಎಂದು ಹೇಳಿದರು.

‘ಹಿಂದೂ ಜಾಗರಣ ವೇದಿಕೆಯು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಆದರೂ, ಸ್ತ್ರೀಯರನ್ನು ಮಾತೆಯರಂತೆ ಕಾಣುವ ಸಂಘಟನೆ, ಹಾಸನದ ಘಟನೆಯನ್ನು ಖಂಡಿಸುತ್ತದೆ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು.

ಸಂಘಟನೆ ಪ್ರಮುಖರಾದ ರವಿರಾಜ್ ಕಡಬ, ಹರೀಶ್ ಶಕ್ತಿನಗರ, ಹರ್ಷಿತ್, ನರಸಿಂಹ ಮಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT