ಗುರುವಾರ , ಡಿಸೆಂಬರ್ 1, 2022
20 °C
ಕಲಾವಿದ ಆನಂದ ಬಂಗೇರ ಅರ್ಕುಳ ಅವರಿಗೆ ಧನಸಹಾಯ; ಪ್ರತಿಭಾವಂತರಿಗೆ ಸನ್ಮಾನ

ಶಿವಾನಂದ ಕರ್ಕೇರ ಹೆಸರಿನಲ್ಲಿ ದತ್ತಿ ನಿಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಂಗಕರ್ಮಿ, ಸಾಹಿತಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಎ. ಶಿವಾನಂದ ಕರ್ಕೇರ ಅವರ ಸ್ಮರಣಾರ್ಥ ದತ್ತಿ ನಿಧಿಯಲ್ಲಿ ವಿವಿಧ ಕಾರ್ಯಕ್ರಮಗಳು ಶುಕ್ರವಾರ ನಡೆದವು.

ತುಳು ಭಾಷೆ ಮತ್ತು ಜಾನಪದ ಕಲೆಯನ್ನು ಬೆಳೆಸುವುದಕ್ಕಾಗಿ ಶಿವಾನಂದ ಅವರ ಕುಟುಂಬದವರು ಕಳೆದ ವರ್ಷ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ₹ 2 ಲಕ್ಷ ಮೊತ್ತದ ದತ್ತಿ ಸ್ಥಾಪಿಸಿದ್ದರು. ತುಳು ಜಾನಪದ ಕಲಾವಿದರ ನೆರವಿಗೆ ಮತ್ತು ಚಿಗುರು ಪ್ರತಿಭೆಗಳ ಪ್ರೋತ್ಸಾಹಕ್ಕೆ ಈ ಮೊತ್ತವನ್ನು ಬಳಸುವುದು ಉದ್ದೇಶವಾಗಿತ್ತು.

ಅಕಾಡೆಮಿ ಸಭಾಂಗಣದಲ್ಲಿ ನಡೆದ ಶಿವಾನಂದ ಕರ್ಕೇರ ಸ್ಮರಣೆ ಕಾರ್ಯಕ್ರಮದಲ್ಲಿ ದತ್ತಿ ನಿಧಿಯ ₹ 10 ಸಾವಿರ ಮೊತ್ತವನ್ನು ದೇವತಾ ಅಲಂಕಾರ ಕಲಾವಿದ ಆನಂದ ಬಂಗೇರ ಅರ್ಕುಳ ಅವರಿಗೆ ನೀಡಲಾಯಿತು. ಆನಂದ ಬಂಗೇರ ಅವರು ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಸಂಜೆ ಕಾಲೇಜಿನ ತುಳು ಅಧ್ಯಾಪಕಿ ಸಾಯಿಗೀತಾ ಅವರನ್ನು ಹಾಗೂ ಪ್ರತಿಭಾವಂತ ಮಕ್ಕಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ತುಳು ರಂಗಕರ್ಮಿ ವಿ.ಜಿ. ಪಾಲ್ ಅವರು ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದಿದ್ದ ಶಿವಾನಂದ ಕರ್ಕೇರ ಅವರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ತುಂಬ ಕಷ್ಟಪಟ್ಟಿದ್ದರು. ಅವರ ತುಳು ರಚನೆಗಳು ಭಾಷೆಯನ್ನು ಶ್ರೀಮಂತಗೊಳಿಸಲು ನೆರವಾಗಿವೆ. ಉತ್ತಮ ಸಂಘಟಕರಾಗಿದ್ದ ಅವರ ಸಾಹಿತ್ಯದಲ್ಲಿ ಪ್ರತಿಭೆ ಬೆಳಗಿದೆ ಎಂದು ಅಭಿಪ್ರಾಯಪಟ್ಟರು. 

ಲೇಖಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ಶಿವಾನಂದ ಅವರು ಕಲಾಪ್ರಿಯರಾಗಿದ್ದರು. ಉತ್ತಮ ವ್ಯಕ್ತಿತ್ವ ಹೊಂದಿದ್ದ ಅವರು ಶ್ರಮಜೀವಿಯೂ ಆಗಿದ್ದರು’ ಎಂದು ಹೇಳಿದರು. 

ಶಿವಾನಂದ ಅವರ ಪತ್ನಿ ಪ್ರಫುಲ್ಲ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌, ಸದಸ್ಯ ನರೇಂದ್ರ ಕೆರೆಕಾಡು, ಸಾಹಿತಿ ಮುದ್ದು ಮೂಡುಬೆಳ್ಳೆ ಮತ್ತಿತರರು ಇದ್ದರು.

ರಸ್ತೆಗೆ ಶಿವಾನಂದ ಕರ್ಕೇರ ಹೆಸರು?

ತುಳು ಪ್ರತಿಭಾವಂತರನ್ನು ಗೌರವಿಸಿದ ಮೇಯರ್ ಜಯಾನಂದ ಅಂಚನ್ ಮಾತನಾಡಿ ನಗರದ ರಸ್ತೆಯೊಂದಕ್ಕೆ ಶಿವಾನಂದ ಕರ್ಕೇರ ಅವರ ಹೆಸರನ್ನು ಇರಿಸಬೇಕು ಎಂದು ಹೇಳಿದರು. ರಸ್ತೆಗೆ ನಾಮಕರಣ ಮಾಡುವ ಮೂಲಕ ಶಿವಾನಂದ ಅವರ ಹೆಸರು ಶಾಶ್ವತವಾಗಬೇಕು ಎಂದು ಅವರು ಹೇಳಿದರು. ಭಾಸ್ಕರ ರೈ ಕುಕ್ಕುವಳ್ಳಿ ಕೂಡ ಶಿವಾನಂದ ಕರ್ಕೇರ ಅವರ ಹೆಸರನ್ನು ರಸ್ತೆಗೆ ಇರಿಸಬೇಕು ಎಂದು ಆಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು