ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿಯಲ್ಲಿ ಕಸ: ವಿದ್ಯಾರ್ಥಿಗಳಿಗೆ ₹5 ಸಾವಿರ ದಂಡ

Published 30 ಮೇ 2024, 6:31 IST
Last Updated 30 ಮೇ 2024, 6:31 IST
ಅಕ್ಷರ ಗಾತ್ರ

ಬಜಪೆ: ರಸ್ತೆ ಬದಿ ಕಸ ಎಸೆದ ವಿದ್ಯಾರ್ಥಿಗಳಿಗೆ ಮುತ್ತೂರು ಗ್ರಾಮ ಪಂಚಾಯಿತಿ ₹5 ಸಾವಿರ ದಂಡ ವಿಧಿಸಿ, ಅವರಿಂದಲೇ ಕಸವನ್ನು ತೆರವುಗೊಳಿಸಿ, ಪೊಲೀಸರ ಸಮ್ಮುಖದಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ಕಳುಹಿಸಿದೆ.

ಮುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕುಪ್ಪೆಪದವು ಚರ್ಚ್ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿರುವ, ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿಗಳು ದುರ್ಗಾಕೊಡಿ ಕ್ರಾಸ್ ಬಳಿ ಮುಖ್ಯರಸ್ತೆ ಬದಿಯಲ್ಲಿ ಕಸ ಎಸೆದಿದ್ದರು. ಕಸದ ಮೂಟೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕಾಲೇಜಿಗೆ ಸಂಭಂದಪಟ್ಟ ಕಾಗದ ಪತ್ರಗಳು ಲಭಿಸಿತು. ಗ್ರಾ.ಪಂ. ಸಿಬ್ಬಂದಿ ಬಜಪೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ವಾಸವಿರುವ ಮನೆಗೆ ತೆರಳಿ ವಿಚಾರಣೆ ನಡೆಸಿದಾಗ ಕಸವನ್ನು ಎಸೆದಿರುವುದಾಗಿ ಒಪ್ಪಿಕೊಂಡರು. ಪೊಲೀಸರು ವಿದ್ಯಾರ್ಥಿಗಳನ್ನು ಮುತ್ತೂರು ಪಂಚಾಯಿತಿಗೆ ಕರೆಸಿ, ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಮತ್ತು ಅಭಿವೃದ್ಧಿ ಅಧಿಕಾರಿ ಪ್ರಮೋದ್ ಎಸ್. ನಾಯ್ಕ್ ಸಮ್ಮುಖದಲ್ಲಿ ₹5 ಸಾವಿರ ದಂಡ ವಿಧಿಸಿದರು. ನಂತರ ಮುಚ್ಚಳಿಕೆ ಬರೆಯಿಸಿಕೊಂಡು, ಕಸ ಸುರಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿದ್ಯಾರ್ಥಿಗಳಿಂದಲೇ ಕಸ ತೆರವು ಮಾಡಿಸಿದರು.

‘ಮುತ್ತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು ಕಂಡುಬಂದರೆ ದಂಡದ ಜತೆಗೆ ಕಾನೂನಿನಡಿ ಲಭ್ಯವಿರುವ  ಎಲ್ಲ ಕ್ರಮ ಕೈಗೊಳ್ಳಲಾಗುವುದು.  ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹದ ವಾಹನ ಕಸ ಸಂಗ್ರಹ ಮಾಡುತ್ತಿದ್ದು, ಸಾರ್ವಜನಿಕರು ಒಣ ಕಸವನ್ನು ವಾಹನಕ್ಕೆ ನೀಡಿ ಸಹಕರಿಸಬೇಕು’ ಎಂದು ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ಹೇಳಿದರು.

ದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT