ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು | ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ

ಕಾಸರಗೋಡು: 3 ದಿನ ಬೆಸ, 3 ದಿನ ಸಮ ಸಂಖ್ಯೆ ವಾಹನ ಓಡಾಟ
Last Updated 6 ಮೇ 2020, 10:17 IST
ಅಕ್ಷರ ಗಾತ್ರ

ಕಾಸರಗೋಡು: ಕೋವಿಡ್‌–19 ಸೋಂಕು ಇರುವ ವಲಯಗಳನ್ನು ಹೊರತುಪಡಿಸಿ, ಇತರ ಪ್ರದೇಶಗಳಿಗೆ ಲಾಕ್‌ಡೌನ್‌ ವಿನಾಯಿತಿ ನೀಡಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶಿಸಿದ್ದಾರೆ. ಕೇರಳ ಸರ್ಕಾರದ ನೂತನ ಆದೇಶಗಳ ಪ್ರಕಾರ ಜಿಲ್ಲೆಯನ್ನು ಕಿತ್ತಳೆ ವಲಯದಲ್ಲಿ ಇರಿಸಲಾಗಿದ್ದು, ಈ ವಿನಾಯಿತಿಗಳನ್ನು ನೀಡಲಾಗಿದೆ.

ವಿನಾಯಿತಿ ಇರುವ ಕೃಷಿ ವಲಯ, ಕಟ್ಟಡ ನಿರ್ಮಾಣ, ಅನಿವಾರ್ಯ ಸೇವೆ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ವಾಹನಗಳು ನಿಬಂಧನೆಗಳ ಅನ್ವಯ ಸಂಚಾರ ಮಾಡಬಹುದು. ಸಂಚಾರದ ಅಗತ್ಯವನ್ನು ಖಚಿತಪಡಿಸುವ ದಾಖಲೆಗಳನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕು.

ಸೋಮವಾರ, ಬುಧವಾರ, ಶುಕ್ರವಾರ ಸಮಸಂಖ್ಯೆಯಲ್ಲಿ ಕೊನೆಗೊಳ್ಳುವ ಸಂಖ್ಯೆಯ ನೋಂದಣಿ ಹೊಂದಿರುವ ಖಾಸಗಿ ವಾಹನಗಳನ್ನು ರಸ್ತೆಗಿಳಿಯಬಹುದು. ಮಂಗಳವಾರ, ಗುರುವಾರ, ಶನಿವಾರ ಕೊನೆಯಲ್ಲಿ ಬೆಸ ಸಂಖ್ಯೆಯ ನೋಂದಣಿ ಇರುವ ಖಾಸಗಿ ವಾಹನಗಳು ಸಂಚರಿಸಬಹುದು. ಟ್ಯಾಕ್ಸಿ ಕ್ಯಾಬ್‌ಗಳಲ್ಲಿ ಒಬ್ಬ ಚಾಲಕ, ಇಬ್ಬರು ಪ್ರಯಾಣಿಕರು, ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆ ಸಂಚಾರ ಮಾಡಬಹುದು. ಆಟೋರಿಕ್ಷಾ ಸಂಚಾರಕ್ಕೆ ಅನುಮತಿಯಿಲ್ಲ. ಅನಿವಾರ್ಯ ಸಂಚಾರಗಳಿಗೆ ಪಾಸ್ ಪಡೆದಿರುವ ಇತರ ವಾಹನಗಳು ಶನಿವಾರ ಹಾಗೂ ಭಾನುವಾರವೂ ಸಂಚಾರ ಮಾಡಬಹುದು.

ಅಗತ್ಯ ಸೇವಾ ಇಲಾಖೆಗಳ ಕಚೇರಿಗಳಿಗೆ ತೆರಳುವ ಸಿಬ್ಬಂದಿಯ ವಾಹನಗಳಿಗೆ ಸಮ, ಬೆಸ ಸಂಖ್ಯೆಗಳ ನಿಯಮ ಅನ್ವಯಿಸುವುದಿಲ್ಲ. ಸಿಬ್ಬಂದಿಗೆ ಗುರುತು ಚೀಟಿ ಇರುವುದರಿಂದ ಪಾಸ್‌ ಅಗತ್ಯವಿಲ್ಲ.

ಶನಿವಾರ ರಜೆ: ರಾಜ್ಯ ಸರ್ಕಾರದ ಆದೇಶ ಪ್ರಕಾರ ಎಲ್ಲ ಸರ್ಕಾರಿ ಕಚೇರಿಗಳು ಚಟುವಟಿಕೆ ನಡೆಸಬೇಕು. ಅನಿವಾರ್ಯ ಸೇವೆಗಳಲ್ಲದ ಸರ್ಕಾರಿ ಕಚೇರಿಗಳಲ್ಲಿ ಗ್ರೂಪ್ ‘ಎ’ ಮತ್ತು ‘ಬಿ’ ಸಿಬ್ಬಂದಿ ಶೇ 50, ಗ್ರೂಪ್ ‘ಸಿ’ ಮತ್ತು ‘ಡಿ’ ಸಿಬ್ಬಂದಿ ಶೇ 33 ರಷ್ಟು ಕಚೇರಿಗೆ ಹಾಜರಾಗಬೇಕು. ಲಾಕ್ ಡೌನ್ ಆದೇಶ ಜಾರಿಯಲ್ಲಿರುವವರೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಿಗೆ ಶನಿವಾರ ರಜೆ ನೀಡಲಾಗಿದೆ.

ನಡೆಸಬಹುದಾದ ಚಟುವಟಿಕೆ: ಕಂಟೈನ್‌ಮೆಂಟ್‌ ವಲಯಗಳಲ್ಲದ ಪ್ರದೇಶಗಳಲ್ಲಿ (ಭಾನುವಾರ ಹೊರತು ಪಡಿಸಿ) ಎಲ್ಲ ದಿನ ಕೃಷಿ ವಲಯಗಳ ಚಟುವಟಿಕೆಗಳು, ಸರ್ಕಾರ ವಲಯದಲ್ಲಿ ಅಂತಿಮ ಹಂತದಲ್ಲಿರುವ ಕಟ್ಟಡ ನಿರ್ಮಾಣ (ನೂತನ ಕಟ್ಟಡ ನಿರ್ಮಾಣ ನಡೆಸುವಂತಿಲ್ಲ), ನೀರಾವರಿ, ಜಲಪ್ರಾಧಿಕಾರ ವ್ಯಾಪ್ತಿಯಲ್ಲಿ ನಿಗದಿಪಡಿಸಲಾದ ಅವಧಿಯಲ್ಲಿ ಪೂರ್ತಿಗೊಳಿಸಬೇಕಾದ ನಿರ್ಮಾಣ ಚಟುವಟಿಕೆಗಳನ್ನು ನಡೆಸಬಹುದು.

ಮೀನುಗಾರಿಕೆ, ತ್ಯಾಜ್ಯ ಸಂಸ್ಕರಣೆ, ಅಕ್ಷಯ ಕೇಂದ್ರಗಳು (ಹವಾನಿಯಂತ್ರಿತ ವ್ಯವಸ್ಥೆಗಳಿಲ್ಲದೇ, ಏಕಕಾಲಕ್ಕೆ ಒಬ್ಬರು ಮಾತ್ರ ಕಚೇರಿಯೊಳಗೆ ಪ್ರವೇಶಿಸುವ ರೀತಿ) ಚಟುವಟಿಕೆ ನಡೆಸಬಹುದು. ಅನುಮತಿ ಪಡೆದಿರುವ ಕರ್ಗಲ್ಲ ಕ್ವಾರಿಗಳು, ಕ್ರಷರ್‌ಗಳು ಕಾರ್ಯಾಚರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT