ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಸಜ್ಜಾಗಿದೆ ಚುನಾವಣಾ ಕಣ: ಇಂದು ಮತದಾನ

ದ.ಕ: ಒಂಬತ್ತು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
Published 26 ಏಪ್ರಿಲ್ 2024, 3:54 IST
Last Updated 26 ಏಪ್ರಿಲ್ 2024, 3:54 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಶುಕ್ರವಾರ ನಡೆಯಲಿದ್ದು, ಕಣದಲ್ಲಿರುವ 9 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

2019ರ ಚುನಾವಣೆಗೆ ಹೋಲಿಸಿದರೆ ಕ್ಷೇತ್ರದದಲ್ಲಿ 83,401 ಮತದಾರರು ‌ಜಾಸ್ತಿ ಆಗಿದ್ದಾರೆ. ಅವರಲ್ಲಿ 43,385 ಮತದಾರರು ಲೋಕಸಭಾ ಚುನಾವಣೆಯಲ್ಲಿ ಮೊದಲ ಸಲ ಮತ ಚಲಾಯಿಸುವ ಅರ್ಹತೆ ಪಡೆದವರು. 2024ರ ಜ.1ರವರೆಗೆ 33,545 ಹೊಸ ಮತದಾರರು ನೊಂದಣಿ ಮಾಡಿಸಿದ್ದರು. ತದ ನಂತರ 9,840 (ಶೇ 29ರಷ್ಟು) ಮಂದಿ ಹೆಸರು ನೋಂದಾಯಿಸಿದ್ದಾರೆ. ಈ ಸಲವೂ ಇಲ್ಲಿ ಮಹಿಳಾ ಮತದಾರರದೇ ಪ್ರಾಬಲ್ಯ.

2019ರ ಚುನಾವಣೆಯಲ್ಲಿ ಕ್ಷೇತ್ರದ 13.45 ಲಕ್ಷ ಮತದಾರರು ಹಕ್ಕನ್ನು ಚಲಾಯಿಸಿದ್ದು, ಶೇ 77.97ರಷ್ಟು ಮತದಾನವಾಗಿತ್ತು. ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕು ಚಲಾಯಿಸುವಂತೆ ಚುನಾವಣಾ ಆಯೋಗವೂ ಸ್ವೀಪ್ ಚಟುವಟಿಕೆ ಮೂಲಕ ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಿತ್ತು. ಕರಾವಳಿಯಲ್ಲಿ ಬಿಸಿಲಿನ ಝಳ ವಿಪರೀತ ಜಾಸ್ತಿ ಆಗಿದೆ. ಶುಕ್ರವಾರ ಅನೇಕ ಕಡೆ ಮದುವೆ ಸಮಾರಂಭಗಳು ಇವೆ. ಈ ನಡುವೆಯೂ  ಕಳೆದ ಸಲಕ್ಕಿಂತ ಈ ಸಲ ಮತದಾನದ ಪ್ರಮಾಣ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ಜಿಲ್ಲಾಡಳಿತದ್ದು.

‘ದಕ್ಷಿಣ ಕನ್ನಡ ಕ್ಷೇತ್ರವು ಮತದಾನದ ಪ್ರಮಾಣದಲ್ಲಿ ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ಈ ಸಲವೂ ಶೇ 80ಕ್ಕಿಂತ ಹೆಚ್ಚು ಮತದಾನವಾಗುವ ನಿರೀಕ್ಷೆ ಇದೆ. ಏನೇ ಅಡೆತಡೆ ಇದ್ದರೂ ಮತದಾರರು ತಪ್ಪದೇ ತಮ್ಮ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಬೇಕು’ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್‌ ತಿಳಿಸಿದರು.

ಸ್ವಾತಂತ್ರ್ಯ ಬಂದ ಬಳಿಕ ನಡೆದಿರುವ 17 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಒಂಬತ್ತು ಸಲ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಎಂಟು ಸಲ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು, 1991ರ ಚುನಾವಣೆ ಬಳಿಕ ಇಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗೆಲ್ಲುತ್ತಾ ಬಂದಿದ್ದಾರೆ. 2019ರ ಚುನಾವಣೆ ವೇಳೆಗೆ ಗೆಲುವಿನ ಅಂತರವನ್ನು ಬಿಜೆಪಿ 2.75 ಲಕ್ಷ ಮತಗಳವರೆಗೆ ಹೆಚ್ಚಿಸಿಕೊಂಡಿತ್ತು. 

ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇರುವ ಈ ಕ್ಷೇತ್ರದಲ್ಲಿ ಈ ಸಲ ಬಿರುಸಿನ ಪೈಪೋಟಿ ಕಂಡು ಬಂದಿದೆ. ಬಿಜೆಪಿ ಅಭ್ಯರ್ಥಿ ಪರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದ್ದಾರೆ. ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ ಭಾಟಿಯಾ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್‌ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದಾರೆ. 

ಕಾಂಗ್ರೆಸ್‌ ಪಕ್ಷವು ಚುನಾವಣೆ ಘೋಷಣೆಯಾಗುವ ಮುನ್ನವೇ ಅಡ್ಯಾರ್‌ನಲ್ಲಿ ಪಕ್ಷದ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿತ್ತು. ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ ಆದಿಯಾಗಿ ಪ್ರಮುಖರು ಭಾಗವಹಿಸಿದ್ದರು. ಆ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್‌, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರಂತಹ ನಾಯಕರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ಸಲ ಬಹಿರಂಗ ಪ್ರಚಾರದ ಅಬ್ಬರ ಕಡಿಮೆ ಇತ್ತು. ಎರಡೂ ಪಕ್ಷಗಳ ನಾಯಕರು ಸಣ್ಣ ಪುಟ್ಟ ಸಭೆಗಳನ್ನು ಆಯೋಜಿಸುವುದಕ್ಕೆ ಹಾಗೂ ಮನೆ ಮನೆ ಪ್ರಚಾರಕ್ಕೆ ಒತ್ತು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT