ಮಂಗಳೂರು: ಚೀನಾದ ಚೆಂಗ್ಡುವಿನಲ್ಲಿ ಈಚೆಗೆ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಮಹಿಳೆಯರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ನಗರಕ್ಕೆ ಮರಳಿದ ಆಳ್ವಾಸ್ ವಿದ್ಯಾಸಂಸ್ಥೆಯ ಕ್ರೀಡಾಪಟು ಭವಾನಿ ಭಗವತಿ ಯಾದವ್ ಅವರಿಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಶನಿವಾರ ಅದ್ಧೂರಿ ಸ್ವಾಗತ ನೀಡಲಾಯಿತು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ‘ದತ್ತು ಸ್ವೀಕಾರ ಯೋಜನೆ’ಯಡಿ ಸಂಸ್ಥೆಯ ಕೋಚ್ ಅಜಿತ್ ಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿರುವ ಆಂಧ್ರಪ್ರದೇಶದ ವಿಜಯವಾಡದ ಭವಾನಿ ಈ ಕ್ರೀಡಾಕೂಟದಲ್ಲಿ 6.32 ಮೀ. ದೂರಕ್ಕೆ ಜಿಗಿಯುವ ಮೂಲಕ ಭಾರತಕ್ಕೆ ಪದಕ ಗೆದ್ದಿದ್ದರು. ಈ ಕ್ರೀಡಾಕೂಟದ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ದೇಶಕ್ಕೆ ಪದಕ ತಂದುಕೊಟ್ಟ ಮೂರನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರನ್ನು ಅಭಿಮಾನಿಗಳು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂ ಹಾರ ಹಾಕಿ, ಜೈಕಾರ ಕೂಗಿ ಬರಮಾಡಿಕೊಂಡರು.
ಜಾಗತಿಕ ಕ್ರೀಡಾಕೂಟದಲ್ಲಿ ಚೊಚ್ಚಲ ಕ್ರೀಡಾಕೂಟದಲ್ಲಿ ಪದಕ ಖುಷಿಯನ್ನು ’ಪ್ರಜಾವಾಣಿ’ ಜೊತೆ ಹಂಚಿಕೊಂಡ ಭವಾನಿ, ‘ಚೀನಾದ ಚೆಂಗ್ಡುವಿನಲ್ಲಿ ಪದಕ ಗೆದ್ದ ಬಗ್ಗೆ ಖುಷಿ ಇದೆ. ಕಳೆದ ಜುಲೈನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ 6.44 ಮೀಟರ್ ದೂರಕ್ಕೆ ಜಿಗಿದಿದ್ದೆ. ಚೆಂಗ್ಡುವಿನಲ್ಲೂ ಅಷ್ಟು ದೂರ ಜಿಗಿಯುತ್ತಿದ್ದರೆ ನನಗೆ ಬೆಳ್ಳಿ ಪದಕ ಸಿಗುತ್ತಿತ್ತು. ಇದು ಸಾಧ್ಯವಾಗಲಿಲ್ಲವಲ್ಲ ಎಂಬ ಬಗ್ಗೆ ಸಣ್ಣ ಬೇಸರವಿದೆ. ನನ್ನ ಮೊದಲ ಜಾಗತಿಕ ಕ್ರೀಡಾಕೂಟವಿದು. ಬೇರೆ ಬೇರೆ ದೇಶಗಳ ಅಥ್ಲೀಟ್‌ಗಳ ತಯಾರಿ ನೋಡಿ ಸ್ವಲ್ಪ ವಿಚಲಿತಳಾಗಿದ್ದೆ. ನನ್ನ ಕೋಚ್ ಅಜಿತ್ ಕುಮಾರ್ ಅವರು ಸ್ಥೈರ್ಯ ತುಂಬಿದ್ದರಿಂದ ದೇಶಕ್ಕೆ ಪದಕ ಗೆಲ್ಲಲು ಸಾಧ್ಯವಾಯಿತು’ ಎಂದರು.
‘ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು 2020ರಲ್ಲಿ ಪೂರ್ಣಗೊಳಿಸಿದ್ದೆ. ಹೆಚ್ಚಿನ ಕೋಚ್‌ಗಳು 16 ವರ್ಷ ಅಥವಾ 18 ವರ್ಷದೊಳಗಿನವರಿಗೆ ಮಾತ್ರ ತರಬೇತಿ ನೀಡಲು ಆಸಕ್ತಿ ತೋರಿಸುತ್ತಾರೆ. ಆದರೆ, ಅಜಿತ್ ಕುಮಾರ್ ಅವರು ನನ್ನ ವಯಸ್ಸಿನ ಬಗ್ಗೆ ಚಿಂತಿಸದೇ, ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದ್ದಾರೆ. ಅವರು ಸಲಹೆ ನೀಡಿದಂತೆ ಸಿದ್ಧತೆ ನಡೆಸುವುದಷ್ಟೇ ನನ್ನ ಕೆಲಸ. ಅವರ ಮಾರ್ಗದರ್ಶನದಲ್ಲಿ ನನ್ನಿಂದ ಇನ್ನಷ್ಟು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬ ಭರವಸೆ ಇದೆ. ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದೇನೆ’ ಎಂದರು.
ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆಯ ಅಧಿಕಾರಿಗಳು ಭವಾನಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಅವರ ಕೋಚ್ ಅಜಿತ್ ಕುಮಾರ್ ಹಾಗೂ ಚೆಂಗ್ಡುವಿನಲ್ಲಿ ನಡೆದ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಟಾಲಿನ್ ಅವರೂ ಇದ್ದರು.
ರೈಲು ನಿಲ್ದಾಣದಲ್ಲಿ ನನಗೆ ಸಿಕ್ಕ ಅದ್ಧೂರಿ ಸ್ವಾಗತದಿಂದ ಮನತುಂಬಿ ಬಂದಿದೆ. ಇನ್ನಷ್ಟು ಸಾಧನೆಗೆ ಇದು ಸ್ಫೂರ್ತಿ ನೀಡಿದೆಭವಾನಿ ಭಗವತಿ ಯಾದವ್ ಲಾಂಗ್‌ಜಂಪ್ ಅಥ್ಲೀಟ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.