ಶನಿವಾರ, ಮೇ 28, 2022
26 °C
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್

ಧ್ವನಿವರ್ಧಕ ಬಳಕೆ: ಆದೇಶ ಪಾಲಿಸಿ- ಕೆ.ಎಸ್.ಮೊಹಮ್ಮದ್ ಮಸೂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿವರ್ಧಕ ಬಳಕೆ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಈ ನಿಯಮ ಪಾಲಿಸಿ ಸೌಹಾರ್ದ ಕಾಪಾಡಬೇಕು’ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ನಿರ್ದಿಷ್ಟ ಡೆಸಿಬಲ್ ಮಿತಿಯಲ್ಲಿ ಧ್ವನಿವರ್ಧಕ ಬಳಸಲು ಸೂಚನೆ ನೀಡಲಾಗಿದೆ. ಎಲ್ಲ ಮಸೀದಿಯವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

‘ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೌಹಾರ್ದ ವಾತಾವರಣವನ್ನು ಕೆಡಿಸುತ್ತಿದ್ದಾರೆ. ಇವರ ಹೊಸ ಅಭಿಯಾನದಿಂದ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲರ ಆಚರಣೆಗಳಿಗೆ ಸಮಸ್ಯೆಯಾಗಿದೆ. ಅವರದ್ದು ರಾಮ ಸೇನೆ ಎನ್ನುವುದಕ್ಕಿಂತ ರಾವಣ ಸೇನೆ ಎಂದರೇ ಸರಿ. ನಿಜವಾದ ಭಯೋತ್ಪಾದಕರಾಗಿರುವ ಅವರನ್ನು ದೇಶದಿಂದ ಓಡಿಸಬೇಕು’ ಎಂದು ಆಗ್ರಹಿಸಿದರು.

‘ಹಲವಾರು ಕ್ರಿಮಿನಲ್ ಪ್ರಕರಣದ ಆರೋಪಿಯಾಗಿರುವ ಮುತಾಲಿಕ್ ಇತ್ತೀಚೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾಗ ಕಮಿಷನರ್ ತಮ್ಮ ಕುರ್ಚಿಯಿಂದ ಎದ್ದು ಬಂದು ಅವರನ್ನು ಸ್ವಾಗತಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಹೇಳಿದರು.

‘ಧಾರ್ಮಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಬಳಸುವಾಗ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂಬ ನಿಯಮ ಸರಿಯಲ್ಲ. ನಾನು ಅಧ್ಯಕ್ಷನಾಗಿರುವ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯನ್ನೇ ತೆಗೆದು ಹಾಕಿದ್ದೇನೆ. ಧ್ವನಿವರ್ಧಕ ಬಳಕೆ ಮಾಡಬೇಕಾದವರು ನಿಯಮ ಪ್ರಕಾರ ಮನವಿ ಸಲ್ಲಿಸಿ ಬಳಕೆ ಮಾಡಬಹುದು’ ಎಂದು ಮಹಮ್ಮದ್ ಮಸೂದ್ ಹೇಳಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಸಿ.ಮಹಮ್ಮದ್, ಭಾಷಾ ತಂಙಳ್, ಬಿ.ಎ.ಮುಮ್ತಾಜ್ ಅಲಿ ಕೃಷ್ಣಾಪುರ, ಕೆ.ಅಶ್ರಫ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು