ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಲ್ಲದ ಅವಧಿಯಲ್ಲೂ ಶಾಸಕ: ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

Published 19 ಮೇ 2024, 6:03 IST
Last Updated 19 ಮೇ 2024, 6:03 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಕೆ.ವಸಂತ ಬಂಗೇರ ಕ್ಷೇತ್ರದಲ್ಲಿ ಐದು ಸಲ ಶಾಸಕರಾಗಿದ್ದರೂ ಕೊನೆಯವರೆಗೂ ಶುದ್ಧಹಸ್ತದವರಾಗಿಯೇ ಉಳಿದಿದ್ದರು. ಇದಕ್ಕಿಂತ ದೊಡ್ಡ ವಿಷಯ ಯಾವುದಿದೆ. ನ್ಯಾಯನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ವ್ಯಕ್ತಿತ್ವದ ಬಂಗೇರ ಶಾಸಕರಾಗಿಲ್ಲದ ಅವಧಿಯಲ್ಲೂ ಶಾಸಕರೇ ಆಗಿದ್ದರು’ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ನಾಗರಿಕ ಸೇವಾ ಟ್ರಸ್ಟ್‌ (ಎನ್‌ಎಸ್‌ಟಿ) ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ದಿ.ಕೆ. ವಸಂತ ಬಂಗೇರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

‘ಎನ್‌ಎಸ್‌ಟಿಯ ಕಾನೂನುಬದ್ಧವಾದ ಹಾಗೂ ಪ್ರಜಾಪ್ರಭುತ್ವಕ್ಕೆ ತಕ್ಕುದಾದ ಹೋರಾಟಗಳಿಗೆಲ್ಲ ಬಂಗೇರ ಅವರು ಬೆಂಬಲವಾಗಿ ಇದ್ದರು. ಎನ್‌ಎಸ್‌ಟಿ ಕಾರ್ಯಕ್ರಮಗಳಲ್ಲಿ ನಾನು ಹಾಗೂ ಬಂಗೇರಾ ಜತೆಯಲ್ಲಿ ಭಾಗವಹಿಸಿದ್ದೆವು. ಆದರೆ, ಇಂದು ಅವರು ನಮ್ಮೊಂದಿಗೆ ಇಲ್ಲ. ಕೆಚ್ಚೆದೆಯ ಬಂಗೇರ ಅವರಿಗೆ ನೂರು ನಮಸ್ಕಾರ’ ಎಂದರು. 

ಟ್ರಸ್ಟ್‌ನ ಅಧ್ಯಕ್ಷ ಕೆ.ಸೋಮನಾಥ ನಾಯಕ್‌, ‘ಕುವೆಟ್ಟುವಿನ ಪಂಚಾಯಿತಿಯಿಂದ ರಾಜಕೀಯ ಜೀವನ ಆರಂಭಿಸಿದ ಬಂಗೇರ ಅನ್ಯಾಯವನ್ನು ಎಂದೂ ಸಹಿಸಿದವರಲ್ಲ. ಶೋಷಣೆ ವಿರುದ್ಧದ ಹೋರಾಟಕ್ಕೆ ಸದಾ ಸಹಕಾರ ನೀಡುತ್ತಿದ್ದರು. ಅವರಂತೆ ಭ್ರಷ್ಟಾಚಾರದ ಸೋಂಕು ಇಲ್ಲದ ರಾಜಕಾರಣಿ ಇನ್ನೊಬ್ಬರಿಲ್ಲ. ಸರ್ಕಾರಿ ಅಧಿಕಾರಿಗಳು, ಪೊಲೀಸರು ಅವರಿಗೆ ಹೆದರಿ ನಡುಗುತ್ತಿದ್ದರು’ ಎಂದು ಸ್ಮರಿಸಿದರು.

ದಲಿತರ ಭೂಹಕ್ಕೊತ್ತಾಯ ಸಮಿತಿಯ ಸಂಚಾಲಕ ಎಂ.ಬಿ. ಕರಿಯ, ಹಿಂದೂ ಹಿತಚಿಂತನ ವೇದಿಕೆಯ ಸಂಚಾಲಕ ಸೋಮಶೇಖರ ದೇವಸ್ಯ, ಟ್ರಸ್ಟಿಗಳಾದ ದಯಾನಂದ ಪೂಜಾರಿ ಮತ್ತು ಸದಾಶಿವ ಹೆಗ್ಡೆ, ಎನ್‌ಎಸ್‌ಟಿ ಉಪಾಧ್ಯಕ್ಷೆ ವಿದ್ಯಾ ಎಸ್. ನಾಯಕ್, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ಬಾಬು ಎ., ದಲಿತ ಮುಖಂಡ ಬಾಬಿ ಮಾಲಾಡಿ, ಸುಕೇಶ್ ಕೆ., ಶೀನ ಪಿಲ್ಯ, ಕುರೈಮತ್ ಮೊದಲಾದವರು ಬಂಗೇರ ಅವರಿಗೆ ನುಡಿನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT