ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೊರೊನಾ ಪರೀಕ್ಷೆಗಾಗಿ ಚೆಂಬುಗುಡ್ಡೆಯಲ್ಲಿ ಸಾಮೂಹಿಕ ಮಾದರಿ ಸಂಗ್ರಹ

ಸೋಂಕಿತ ಓಡಾಡಿದ್ದ ಪ್ರದೇಶದಲ್ಲಿ ಜನರ ಪರೀಕ್ಷೆ * ಮಾದರಿ ನೀಡಿ ಜನರಿಗೆ ಧೈರ್ಯ ತುಂಬಿದ ಶಾಸಕ ಯು.ಟಿ.ಖಾದರ್
Last Updated 13 ಏಪ್ರಿಲ್ 2020, 10:11 IST
ಅಕ್ಷರ ಗಾತ್ರ
ADVERTISEMENT
""
""

ಮಂಗಳೂರು: ಕೋವಿಡ್‌–19 ಸೋಂಕು ಪೀಡಿತ ತಬ್ಲೀಗಿ ಜಮಾತ್‌ ಸದಸ್ಯ ಓಡಾಡಿದ್ದ ಇಲ್ಲಿನ ಉಳ್ಳಾಲ ನಗರಸಭೆ ವ್ಯಾಪ್ತಿಯ ಚೆಂಬುಗುಡ್ಡೆ ಪ್ರದೇಶದಲ್ಲಿ ಪರೀಕ್ಷೆಗಾಗಿ ಸಾಮೂಹಿಕ ಮಾದರಿ ಸಂಗ್ರಹಿಸಲಾಗುತ್ತಿದೆ. ಸೋಮವಾರ ಬೆಳಿಗ್ಗೆಯಿಂದ 100 ಜನರ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಕೊರೊನಾ ವೈರಸ್‌ ಸೋಂಕು ತಗಲಿರುವ ತಬ್ಲೀಗಿ ಜಮಾತ್‌ನ ಸದಸ್ಯನೊಬ್ಬ ಚೆಂಬುಗುಡ್ಡೆ ಪ್ರದೇಶದಲ್ಲಿ ಓಡಾಡಿದ್ದ. ದೆಹಲಿಯಲ್ಲಿ ನಡೆದ ತಬ್ಲೀಗ್‌ ಸಮಾವೇಶಕ್ಕೆ ಹೋಗಿ ಬಂದಿದ್ದ ವ್ಯಕ್ತಿಯಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಂಡಿತ್ತು. ಆತ ಚೆಂಬುಗುಡ್ಡೆಯಲ್ಲಿ ಓಡಾಡಿರುವುದಾಗಿ ಮಾಹಿತಿ ನೀಡಿದ್ದ. ಈ ಕಾರಣದಿಂದ ಆ ಪ್ರದೇಶದಲ್ಲಿ ಸಾಮೂಹಿಕ ಮಾದರಿ ಸಂಗ್ರಹಿಸಿ, ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.

ಧೈರ್ಯ ತುಂಬಿದ ಶಾಸಕ ಖಾದರ್‌: ಜಿಲ್ಲಾ ಮಟ್ಟದ ವೈದ್ಯರ ತಂಡ ಸೋಮವಾರ ಬೆಳಿಗ್ಗೆ ಚೆಂಬುಗುಡ್ಡೆಯಲ್ಲಿ ಮಾದರಿ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕೆಲವು ಸಮಯದವರೆಗೆ ಯಾರೊಬ್ಬರೂ ಮಾದರಿ ನೀಡಲು ಬರಲಿಲ್ಲ. ಕೊರೊನಾ ವೈರಸ್‌ ಸೋಂಕು ತಗಲುವ ಭೀತಿಯಿಂದ ಜನರು ಮಾದರಿ ನೀಡಲು ಹಿಂದೇಟು ಹಾಕಿದ್ದರು.

ಮಾದರಿ ಸಂಗ್ರಹ ಕೇಂದ್ರಕ್ಕೆ ಬಂದ ಸ್ಥಳೀಯ ಶಾಸಕ ಯು.ಟಿ.ಖಾದರ್‌, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಸ್ಥಳೀಯ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಮತ್ತು ಕೆಲವು ಮುಖಂಡರು ಸ್ವಯಂಪ್ರೇರಿತರಾಗಿ ಮಾದರಿಗಳನ್ನು ನೀಡಿದರು. ಆ ಬಳಿಕ ಜನರು ಧೈರ್ಯದಿಂದ ಬಂದು ಪರೀಕ್ಷೆಗೆ ಗಂಟಲಿನ ದ್ರವದ ಮಾದರಿ ನೀಡಿದರು.

‘ನಾವು ಸ್ಥಳಕ್ಕೆ ಹೋಗುವವರೆಗೆ ಒಬ್ಬರೂ ಮಾದರಿ ನೀಡಲು ಬಂದಿರಲಿಲ್ಲ. ಜನರಲ್ಲಿ ಭಯ ಇತ್ತು. ಅದನ್ನು ಹೋಗಲಾಡಿಸಲು ನಾನೇ ಸ್ವತಃ ಮಾದರಿ ನೀಡಿದೆ. ನನ್ನ ಜೊತೆಗಿದ್ದ ಹಲವರು ಮಾದರಿ ನೀಡಿದರು. ಭಯಪಡದಂತೆ ಜನರಲ್ಲಿ ಮನವಿ ಮಾಡಿಕೊಂಡೆ. ಆ ನಂತರ ಜನರು ಮಾದರಿ ಸಂಗ್ರಹ ಕೇಂದ್ರಕ್ಕೆ ಬಂದು, ಗಂಟಲಿನ ದ್ರವವನ್ನು ಪರೀಕ್ಷೆಗೆ ನೀಡಿದರು’ ಎಂದು ಶಾಸಕ ಯು.ಟಿ.ಖಾದರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಧ್ಯಾಹ್ನದವರೆಗೆ 100 ಮಂದಿಯ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇನ್ನೂ ಜನರು ಬರುತ್ತಲೇ ಇದ್ದಾರೆ. ಆದರೆ, ಪರೀಕ್ಷಾ ಕಿಟ್‌ಗಳು ಖಾಲಿ ಆಗಿರುವುದರಿಂದ ಮಾದರಿ ಸಂಗ್ರಹ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT