ಮಂಗಳವಾರ, ಅಕ್ಟೋಬರ್ 26, 2021
23 °C
ಕರಾವಳಿಯ ವಿಶಿಷ್ಟ ನೃತ್ಯ ಪ್ರಕಾರ ಹುಲಿವೇಷ

ನವರಾತ್ರಿ: ಕರಾವಳಿಯಲ್ಲಿ ‘ದಸರಾ ಹುಲಿ’ಗಳ ದರ್ಬಾರ್‌ ಶುರು

ಪ್ರದೀಶ್ ಎಚ್‌. ಮರೋಡಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಸರಾ ಬಂದರೆ ಸಾಕು ಕರಾವಳಿ ಭಾಗದಲ್ಲಿ ಹುಲಿಗಳ ದರ್ಬಾರ್‌ ಆರಂಭವಾಗುತ್ತದೆ. ವಿವಿಧ ದೇವಸ್ಥಾನ, ರಸ್ತೆಗಳಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಹುಲಿಗಳು ಢೋಲು ಮತ್ತು ತಾಸೆಯ ತಾಳಕ್ಕೆ ಹೆಜ್ಜೆ ಹಾಕುತ್ತಿರುತ್ತವೆ. ಈ ಹುಲಿಗಳ ಕಸರತ್ತು ನೋಡುವುದೇ ಕಣ್ಣಿಗೆ ಹಬ್ಬ.

ಕರಾವಳಿಯ ವಿಶಿಷ್ಟ ನೃತ್ಯ ಪ್ರಕಾರಗಳಲ್ಲಿ ಹುಲಿವೇಷವೂ ಒಂದು. ನವರಾತ್ರಿ ಉತ್ಸವಕ್ಕೂ, ಹುಲಿವೇಷಕ್ಕೂ ನೇರ ಸಂಬಂಧವೂ ಇದೆ. ಹುಲಿಯು ದುರ್ಗಾ ದೇವಿಯ ವಾಹನ. ದೇವಿಯ ಅನುಗ್ರಹ ಪಡೆಯಲು ಮತ್ತು ದುಷ್ಟ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಸಂಕೇತವಾಗಿ ಹುಲಿವೇಷದ ಆಚರಣೆ ಚಾಲ್ತಿಯಲ್ಲಿದೆ.

ಹುಲಿವೇಷದ ಕಲೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಶಾರದೆಯ ಪ್ರತಿಷ್ಠಾಪನೆ, ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಹುಲಿವೇಷದ ಆಕರ್ಷಕ ನೃತ್ಯವನ್ನು ಕಾಣಬಹುದಾಗಿದೆ. ಮಾತ್ರವಲ್ಲದೆ, ಸ್ಥಳೀಯ ಯುವಕರು ಇಡೀ ಮೈಗೆ ಹುಲಿಯ ಬಣ್ಣ ಹಚ್ಚಿ ಮನೆಮನೆಗೆ ತೆರಳಿ ಕುಣಿಯುತ್ತಾರೆ. ನಾನಾ ಕಸರತ್ತಿನ ಮೂಲಕ ಜನರನ್ನು ರಂಜಿಸಿ, ಇಂತಿಷ್ಟು ಹಣ ಪಡೆಯುವ ವಾಡಿಕೆಯಿದೆ.

‘ಕರಾವಳಿಯಲ್ಲಿ ಹುಲಿವೇಷ ಆಚರಣೆ ಯಾವಾಗ ಆರಂಭವಾಯಿತು ಎಂಬುದಕ್ಕೆ ಸ್ಪಷ್ಟ ಪುರಾವೆ ಸಿಗುವುದು ಕಷ್ಟ. ಆದರೆ, ತಲೆತಲಾಂತರದಿಂದ ಬಂದ ಈ ವಿಶಿಷ್ಟ ಕಲೆ ಬ್ರಿಟಿಷರ ಕಾಲದಲ್ಲೇ ಇತ್ತು. ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಈ ಕಲೆಯಲ್ಲಿ ಸಾಕಷ್ಟು ಸಂಪ್ರದಾಯಗಳಿವೆ’ ಎನ್ನುತ್ತಾರೆ ಹುಲಿವೇಷದ ಪ್ರೋತ್ಸಾಹಕ, ಎಸ್‌ಡಿಎಂ ಕಾನೂನು ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಎಂ. ಉದಯಕುಮಾರ್‌.

‘ಹುಲಿವೇಷ ತಂಡವನ್ನು ಕಟ್ಟುವುದು ಸಾಮಾನ್ಯದ ಮಾತಲ್ಲ. ಒಂದು ತಂಡಕ್ಕೆ ದಿನಕ್ಕೆ ಕನಿಷ್ಠ ₹ 50 ಸಾವಿರದಿಂದ ₹ 60 ಸಾವಿರ ಖರ್ಚುವೆಚ್ಚಗಳಿವೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಹುಲಿವೇಷ ಹಾಕುವ ತಂಡಗಳು ಕಡಿಮೆಯಾಗುತ್ತಿವೆ. ಇದು ಕರಾವಳಿಯ ಹಿರಿಮೆ ಆಗಿರುವುದರಿಂದ ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು’ ಎಂಬುದು ಅವರ ಕಳಕಳಿ.

‘ಶಾರದಾಂಬೆಯ ಸೇವೆಯಾಗಿ 15 ವರ್ಷಗಳಿಂದ ಹುಲಿ ವೇಷ ಹಾಕುತ್ತಿದ್ದೇನೆ. ಮಕ್ಕಳಲ್ಲಿ ಅಂಗವಿಕಲತೆ ಅಥವಾ ಆರೋಗ್ಯ ಸಮಸ್ಯೆ ಇದ್ದರೆ, ಹುಲಿವೇಷದ ಹರಕೆ ಹೊತ್ತರೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಚಿಕ್ಕ ಮಕ್ಕಳಿಗೂ ಹುಲಿವೇಷವನ್ನು ಹಾಕಲಾಗುತ್ತದೆ. ಕೋವಿಡ್‌ ಹೊಡೆತದ ನಡುವೆಯೂ ಕರಾವಳಿಯಲ್ಲಿ ಹುಲಿವೇಷಕ್ಕೆ ಜನಬೆಂಬಲ ಇದೆ’ ಎನ್ನುತ್ತಾರೆ ಕುದ್ರೋಳಿ ಶಾರದಾ ಪ್ರತಿಷ್ಠಾಪನಾ ಹುಲಿ ತಂಡದ ರೂಪೇಶ್‌.

ಹುಲಿವೇಷ ನವರಾತ್ರಿಯ ವಿಶೇಷವಾದರೂ ಗಣೇಶ ಚತುರ್ಥಿ, ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬಗಳಲ್ಲಿಯೂ ಇವುಗಳನ್ನು ಕಾಣಬಹುದಾಗಿದೆ. ವಿವಿಧ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಹುಲಿವೇಷ ಗುರುತಿಸಿಕೊಂಡಿದೆ.

ಆಚರಣೆ ಹುಟ್ಟಿದ್ದು ಹೇಗೆ?

ಹುಲಿವೇಷ ಆಚರಣೆ ಹೇಗೆ ಆರಂಭವಾಯಿತು ಎಂಬ ಬಗ್ಗೆ ಉದಯಕುಮಾರ್‌ ಅವರು ಕುತೂಹಲಕಾರಿ ವಿಚಾರಗಳನ್ನು ತಿಳಿಸುತ್ತಾರೆ. ‘ಈ ಬಗ್ಗೆ ಎರಡು ರೀತಿಯ ಕಥೆಗಳಿವೆ. ಮಂಗಳಾದೇವಿ ದೇವಸ್ಥಾನದ ಬಳಿ ಒಬ್ಬ ಹುಡುಗನಿಗೆ ವರ್ಷ ತುಂಬಿದರೂ ನಡೆಯಲು ಆಗುತ್ತಿರಲಿಲ್ಲ. ಆಗ ಆತನ ಹೆತ್ತವರು ಮಂಗಳಾದೇವಿಯ ಬಳಿ ಪ್ರಾರ್ಥಿಸಿ, ಮುಂದಿನ ವರ್ಷ ನಮ್ಮ ಮಗ ನಡೆಯುವಂತಾದರೆ ಹುಲಿವೇಷ ಹಾಕಿಸುತ್ತೇವೆ ಎಂದು ಕೇಳಿಕೊಂಡಾಗ ದೇವಿ ನಡೆಸಿಕೊಟ್ಟಿದ್ದಾಳೆ ಎನ್ನುವುದು ಒಂದು ಕಥೆ’.

‘ಮತ್ತೊಂದು ಕಥೆಯ ಪ್ರಕಾರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಂಬಾ ಭತ್ತದ ಗದ್ದೆಗಳಿದ್ದವು. ಆ ಗದ್ದೆಗಳಿಗೆ ಹುಲಿಗಳು ಆಗಾಗ ಬಂದು ಬೆಳೆ ನಾಶ ಮಾಡುತ್ತಿದ್ದವು. ಒಮ್ಮೆ ರೈತರೆಲ್ಲರೂ ಒಟ್ಟು ಸೇರಿ ಪ್ರಾರ್ಥನೆ ಮಾಡಿ, ಹುಲಿ ದಾಳಿ ನಿಂತು ಬೆಳೆ ಉಳಿದರೆ ಮುಂದಿನ ವರ್ಷ ಶಾರದಾ ಮಾತೆಗೆ ಹರಕೆಯ ರೂಪದಲ್ಲಿ ಹುಲಿವೇಷ ಹಾಕುತ್ತೇವೆ ಎಂದು ಹರಕೆ ಹೇಳಿಕೊಂಡರು ತಮ್ಮ ಬಯಕೆ ಈಡೇರಿದ ಬಳಿದ ಈ ಆಚರಣೆ ಚಾಲ್ತಿಗೆ ಬಂತು ಎಂಬ ಮಾತು ನಾನು ಹಿರಿಯರಿಂದ ಕೇಳಿದ್ದೇನೆ’ ಎನ್ನುತ್ತಾರೆ ಅವರು.

‘ಕಡಿಮೆಯಾಗುತ್ತಿದೆ ಹುಲಿ ತಂಡ’

‘ಐದಾರು ವರ್ಷಗಳ ಹಿಂದೆ ನವರಾತ್ರಿ ಸಂದರ್ಭದಲ್ಲಿ ಸುಮಾರು 10 ತಂಡಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದೆವು. ವರ್ಷದಿಂದ ವರ್ಷಕ್ಕೆ ತಂಡಗಳು ಕಡಿಮೆಯಾಗುತ್ತಿದೆ. ಕೋವಿಡ್‌ ಬಂದ ನಂತರವಂತೂ ಬಣ್ಣ ಹಚ್ಚುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸುವಿ ಆರ್ಟ್ಸ್‌ನ ಯು.ಕೆ. ಸುರೇಶ್‌.

‘ಸ್ನೇಹಿತ ವಿಶ್ವನಾಥ್‌ ಅವರೊಂದಿಗೆ ನಾಲ್ಕು ದಶಕಗಳಿಂದ ಹುಲಿವೇಷಧಾರಿಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಸುಮಾರು 10 ಮಂದಿ ಯುವಕರು ಇದ್ದಾರೆ. ಅವರು ಬೇರೆ ಬೇರೆ ಉದ್ಯೋಗದಲ್ಲಿದ್ದರೂ ದಸರಾ ಸಂದರ್ಭದಲ್ಲಿ ಒಟ್ಟಾಗಿ ಹುಲಿಗಳನ್ನು ತಯಾರು ಮಾಡುವ ಕೆಲಸ ಮಾಡುತ್ತೇವೆ. ಬಣ್ಣ ಹಚ್ಚಲು ಹಿಂದೆ ವಾಟರ್‌ ಕಲರ್‌ ಬಳಸುತ್ತಿದ್ದೇವು. ಅದು ಹೆಚ್ಚು ಸಮಯ ಉಳಿಯದ ಕಾರಣ ಈಗ ಆಯಿಲ್‌ ಕಲರ್‌ ಬಳಸುತ್ತೇವೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು