ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಕಂಬಳೋತ್ಸವ ಮಾ.6ರಂದು

ಪ್ರವಾಸೋದ್ಯಮ ಸ್ವರೂಪ ನೀಡುವ ಯತ್ನ: ಫೋಟೊಗ್ರಫಿ, ಚಿತ್ರಕಲೆ ಸ್ಪರ್ಧೆ
Last Updated 4 ಮಾರ್ಚ್ 2021, 14:37 IST
ಅಕ್ಷರ ಗಾತ್ರ

ಮಂಗಳೂರು: ತುಳುನೆಲದ ಕ್ರೀಡಾಸಂಸ್ಕೃತಿಯಾದ ಕಂಬಳವನ್ನು ಉಳಿಸಿ– ಬೆಳೆಸುವ ನಿಟ್ಟಿನಲ್ಲಿ ಆರಂಭಗೊಂಡಿದ್ದ ರಾಮ–ಲಕ್ಷ್ಮಣ ಜೋಡುಕರೆ ಕಂಬಳದ ನಾಲ್ಕನೇ ವರ್ಷದ ‘ಮಂಗಳೂರು ಕಂಬಳೋತ್ಸವ’ ಮಾ.6ರಂದು ನಗರದ ಬಂಗ್ರ ಕೂಳೂರು ಬಳಿಯ ಗೋಲ್ಡ್‌ಪಿಂಚ್ ಸಿಟಿಯಲ್ಲಿ ನಡೆಯಲಿದೆ.

ಕಂಬಳದ ಸಾರಥ್ಯ ವಹಿಸಿದ ಕ್ಯಾ. ಬ್ರಿಜೇಶ್‌ ಚೌಟ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನೆಲದ ಕೃಷಿ ಸಂಸ್ಕೃತಿಯ ಕ್ರೀಡೆಯಾದ ಕಂಬಳಕ್ಕೆ ಆತಂಕ ಬಂದ ಸಂದರ್ಭದಲ್ಲಿ, ನಗರದಲ್ಲಿ ಆಯೋಜಿಸುವ ಮೂಲಕ ಜನಮನ್ನಣೆ ಗಳಿಸಬೇಕು ಎಂದು ಆರಂಭಿಸಿದ್ದೆವು. ಈ ಬಾರಿ ನಾಲ್ಕನೇ ವರ್ಷವಾಗಿದ್ದು, ಹಿರಿಯರು ಹಾಗೂ ಜಿಲ್ಲಾ ಕಂಬಳ ಸಮಿತಿ ಸಹಕಾರದಲ್ಲಿ ಯುವಜನತೆ ಸೇರಿಕೊಂಡು ನಡೆಸುತ್ತಿದ್ದೇವೆ’ ಎಂದರು.

‘ಪ್ರತಿ ವರ್ಷದಂತೆ ಆರು ವಿಭಾಗಗಳಲ್ಲಿ ಸುಮಾರು 120 ಜೋಡಿ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಂ.ಆರ್.ಜಿ. ಗ್ರೂಪ್‌ ಸಿಎಂಡಿ ಕೆ.ಪ್ರಕಾಶ್ ಶೆಟ್ಟಿ ಗೌರವಾಧ್ಯಕ್ಷತೆ ಸಮಿತಿ ಮೂಲಕ ಸಕಲ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ನೇರ ಪ್ರಸಾರ ಇರಲಿದೆ’ ಎಂದರು.

‘ಮಾ.6ರಂದು ಬೆಳಿಗ್ಗೆ 8.30ಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್ ಚಾಲನೆ ನೀಡುವರು. ಸಂಜೆ 6ಕ್ಕೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ನಳಿನ್‌ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮತ್ತಿತರರು ಪಾಲ್ಗೊಳ್ಳುವರು. ಮಾ.7ರಂದು ಬೆಳಿಗ್ಗೆ 8ಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಸ್ತೂರಿ ಪಂಜ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ’ ಎಂದರು.

ಚಿತ್ರಕಲೆ–ಛಾಯಾಚಿತ್ರ

ಈ ಬಾರಿ ಕಂಬಳದಲ್ಲಿ ಚಿತ್ರಕಲೆ ಹಾಗೂ ಛಾಯಾಚಿತ್ರ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.6ರಂದು ಬೆಳಿಗ್ಗೆ 10 ಗಂಟೆಯ ಮೊದಲು ನೋಂದಾವಣೆ ಕಡ್ಡಾಯ. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನಗಳಿವೆ ಎಂದರು.

ಮಹಿಳಾ ಜಾಕಿ

‘ಯಾವುದೇ ಕ್ರೀಡೆಗೆ ವಿಶ್ವಮಟ್ಟದ ಮಾನ್ಯತೆ ಸಿಗಬೇಕಾದರೆ, ಅದರಲ್ಲಿ ಪುರುಷ ಹಾಗೂ ಮಹಿಳೆಯರ ಸ್ಪರ್ಧೆಗೆ ಅವಕಾಶಗಳು ಇರಬೇಕು ಎಂದು ಚಿತ್ರನಟ ರಾಜೇಂದ್ರಬಾಬು ಸಿಂಗ್ ಪ್ರಸ್ತಾವಿಸಿದ್ದರು. ಅಲ್ಲದೇ, ಕಂಬಳದಲ್ಲಿ ಪಾಲ್ಗೊಳ್ಳುವುದಾಗಿ ಕೆಲವು ಹೆಣ್ಣುಮಕ್ಕಳು ಸ್ವಯಂ ಆಸಕ್ತಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪರಿಶೀಲಿಸುವುದಾಗಿ ಕಂಬಳ ಅಕಾಡೆಮಿ ತಿಳಿಸಿತ್ತು. ಪ್ರಯತ್ನ ಸಾಗಿದೆ’ ಎಂದು ಕಂಬಳದಲ್ಲಿ ಮಹಿಳಾ ಜಾಕಿ ಪಾಲ್ಗೊಳ್ಳುವ ಕುರಿತು ಹಿರಿಯರಾದ ಗುಣಪಾಲ ಕಡಂಬ ತಿಳಿಸಿದರು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್.ಶೆಟ್ಟಿ, ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ, ಸಂಘಟನಾ ಸಮಿತಿಯ ಉಳ್ಳಾಲ್ ನಂದನ್ ಮಲ್ಯ, ತಲಪಾಡಿ ದೊಡ್ಡಮನೆ ಪ್ರೀತಮ್‌ ರೈ, ಸುಜಿತ್ ಪ್ರತಾಪ್, ಮುಗರೋಡಿ ಸುಧಾಕರ್ ಮತ್ತಿತರರು ಇದ್ದರು.

ಕಂಬಳಕರೆಗೆ ಪ್ರವಾಸಿಗರಿಗೆ ಕರೆ

‘ಕಂಬಳದತ್ತ ಪ್ರವಾಸಿಗರನ್ನು ಸೆಳೆಯಲು ಈ ಬಾರಿ ಪ್ರವಾಸೋದ್ಯಮ ಇಲಾಖೆಯ ಸುಮಾರು 40 ‘ಪ್ರವಾಸ ನಿರ್ವಾಹಕ’ರನ್ನು ಆಹ್ವಾನಿಸಲಾಗಿದೆ. ಅವರಿಗೆ ಮುಂದಿನ ವರ್ಷದಿಂದ ಕಂಬಳದ ವಾರ್ಷಿಕ ಕ್ಯಾಲೆಂಡರ್ ನೀಡುತ್ತೇವೆ. ಅವರು ಪ್ರವಾಸಿನೌಕೆ, ವಿಮಾನ ಇತ್ಯಾದಿಗಳ ಮೂಲಕ ಬರುವ ದೇಶ–ವಿದೇಶದ ಪ್ರವಾಸಿಗರನ್ನು ಇಲ್ಲಿಗೆ ಕರೆದುಕೊಂಡು ಬರಲಿದ್ದಾರೆ. ಆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರಯತ್ನಿಸಲಾಗುವುದು’ ಎಂದು ಕ್ಯಾ.ಬ್ರಿಜೇಶ್‌ ಚೌಟ ತಿಳಿಸಿದರು.

ಕಂಬಳಕ್ಕೆ ವಿಶ್ವಮಾನ್ಯತೆಗೆ ಯತ್ನ

‘ಕಂಬಳಕ್ಕೆ ವಿಶ್ವಮಾನ್ಯತೆ ಸಿಗಬೇಕಾದರೆ, ಎಲ್ಲೆಡೆ ಏಕರೂಪಿ ಮಾನದಂಡ ಇರಬೇಕು. ಈ ನಿಟ್ಟಿನಲ್ಲಿ ಸಮಿತಿಯು ಕರೆ(ಟ್ರ್ಯಾಕ್)ಯ ದೂರ, ವಿವಿಧ ನಿಯಮಾವಳಿಗಳನ್ನು ಏಕರೂಪಕ್ಕೆ ತರಲು ಪ್ರಯತ್ನಿಸುತ್ತದೆ. ಹಂತ ಹಂತವಾಗಿಹೆಜ್ಜೆ ಇಡುತ್ತೇವೆ’ ಎಂದು ಸಮಿತಿಯ ಗುಣಪಾಲ ಕಡಂಬ ಹಾಗೂ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT