ಸೋಮವಾರ, ಮಾರ್ಚ್ 8, 2021
32 °C
28 ಸಂಘಟನೆಗಳು ಬಾಗಿ: ಐವನ್‌ ಡಿಸೋಜ

ಮಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಸೆ.10ರಂದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ನಡೆಯಲಿರುವ ಹೋರಾಟದ ಅಂಗವಾಗಿ ಮಂಗಳೂರು ನಗರದಲ್ಲಿ ಸೋಮವಾರ 28 ಸಮಾನಮನಸ್ಕ ಸಂಘಟನೆಗಳು ಜೊತೆಗೂಡಿ ಪ್ರತಿಭಟನೆ ನಡೆಸಲಿವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು, ಆಟೊ ಮತ್ತು ಬಸ್ ಮಾಲೀಕರು, ವಾಹನ ಚಾಲಕರು, ಸರಕು ಸಾಗಣೆ ವಾಹನಗಳ ಮಾಲೀಕರು, ವಿದ್ಯಾರ್ಥಿ ಸಂಘಟನೆಗಳು, ವಕೀಲರ ಸಂಘ, ಮಹಿಳಾ ಸಂಘಟನೆಗಳು ಈ ಹೋರಾಟದಲ್ಲಿ ಭಾಗವಹಿಸಲಿವೆ. ಕಾಂಗ್ರೆಸ್‌ ಪಕ್ಷ ಕರೆನೀಡಿರುವ ಸೆ. 10ರ ರಾಷ್ಟ್ರವ್ಯಾಪಿ ಬಂದ್‌ಗೆ ಮಂಗಳೂರಿನಲ್ಲಿ 28 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ’ ಎಂದರು.

ಸೋಮವಾರದ ಪ್ರತಿಭಟನೆಗೆ ಪೂರಕವಾಗಿ ಶನಿವಾರ ಸಂಜೆ 6 ಗಂಟೆಗೆ ಕುದ್ರೋಳಿ ವೃತ್ತ, ರಾತ್ರಿ 7 ಗಂಟೆಗೆ ಅತ್ತಾವರ ಕೆಎಂಸಿ ಆಸ್ಪತ್ರೆ ಎದುರು, ರಾತ್ರಿ 8 ಗಂಟೆಗೆ ಮಹಾಕಾಳಿಪಡ್ಪು, ರಾತ್ರಿ 8.30 ವೆಲೆನ್ಸಿಯಾ ವೃತ್ತ ಮತ್ತು 9 ಗಂಟೆಗೆ ಕಂಕನಾಡಿ ಮೈದಾನದಲ್ಲಿ ಜಾಗೃತಿ ಪ್ರತಿಭಟನಾ ಸಭೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿತ್ಯವೂ ಆಗುತ್ತಿದೆ. ಇದರಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ದಿನಬಳಕೆಯ ವಸ್ತುಗಳ ದರದಲ್ಲೂ ಹೆಚ್ಚಳ ಆಗುತ್ತಿದೆ. ಪರಿಣಾಮವಾಗಿ ಸಾಮಾನ್ಯ ಜನರ ಜೀವನವೆಚ್ಚದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ದೂರಿದರು.

‘ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ನಿರಂತರವಾಗಿ ಹೆಚ್ಚಳ ಮಾಡುವ ಮೂಲಕ ಜನರ ಹಣವನ್ನು ಲೂಟಿ ಮಾಡುತ್ತಿದೆ. ಮಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 82.03 ಮತ್ತು ಪ್ರತಿ ಲೀಟರ್‌ ಡೀಸೆಲ್ ದರ ₹ 75.18 ತಲುಪಿದೆ. ಇದು ದಾಖಲೆಯ ಹೆಚ್ಚಳ. ಕೇಂದ್ರ ಸರ್ಕಾರ ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಬೇಕು. ಆಗ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ₹ 20ರಿಂದ 22ರವರೆಗೆ ಇಳಿಕೆಯಾಲಿದೆ’ ಎಂದು ಐವನ್ ಡಿಸೋಜ ಆಗಹಿಸಿದರು.

‘ಬಿಜೆಪಿ ಕೇಂದ್ರದಲ್ಲಿ ಮಾತ್ರ ಆಡಳಿತ ನಡೆಸುತ್ತಿಲ್ಲ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಈ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳನ್ನು ದೂರಿ ತಪ್ಪಿಸಿಕೊಳ್ಳಲಾಗದು. ಎಲ್ಲ ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಧಾರ ಮಾಡಬೇಕು’ ಎಂದು ಒತ್ತಾಯಿಸಿದರು.

2014ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 108.26 ಅಮೆರಿಕನ್ ಡಾಲರ್‌ ಇದ್ದಾಗ ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ಬೆಲೆ ₹ 65 ಇತ್ತು. ಈಗ ಕಚ್ಚಾ ತೈಲದ ಬೆಲೆ 63 ಅಮೆರಿಕನ್ ಡಾಲರ್‌ಗೆ ಇಳಿದಿದೆ. ಆದರೆ, ಪೆಟ್ರೋಲ್‌ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ. ಎಲ್‌ಪಿಜಿ ಸಿಲಿಂಡರ್‌ ದರ ಕೂಡ ದುಪ್ಪಟ್ಟಾಗಿದೆ ಎಂದು ಹೇಳಿದರು.

ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸುವ ಕರಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. 10,000 ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು