ಮಂಗಳೂರು: ನಗರದ ಪಾಂಡೇಶ್ವರದ ಫಿಜಾ ಪೋರಮ್ ಮಾಲ್ ಬಳಿಯಿಂದ ಕಾಲೇಜೊಂದರ ವಿದ್ಯಾರ್ಥಿ ಹಾಗೂ ಅತನ ಇಬ್ಬರು ಸ್ನೇಹಿತರನ್ನು ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಐವರನ್ನು ಒಳಗೊಂಡ ಗುಂಪು ಅಪಹರಿಸಿ ಹಲ್ಲೆ ನಡೆಸಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ದಿಯಾನ್ ಹಾಗೂ ಸಲ್ಮಾನ್ ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನೆಹರೂ ಮೈದಾನದಲ್ಲಿ ಈಚೆಗೆ ನಡೆದಿದ್ದ ಇಂಡಿಪೆಂಡೆನ್ಸ್ ಕಪ್ ಪುಟ್ಬಾಲ್ ಟೂರ್ನಿಯಲ್ಲಿ ಎರಡು ಕಾಲೇಜುಗಳ ತಂಡಗಳ ನಡುವೆ ಆ. 14ರಂದು ಜಗಳ ನಡೆದಿತ್ತು. ಗೆದ್ದ ತಂಡ ಹಾಗೂ ಸೋತ ತಂಡಗಳ ವಿದ್ಯಾರ್ಥಿಗಳ ನಡುವೆ ನಡೆದಿದ್ದ ಈ ಜಗಳವೇ ವಿದ್ಯಾರ್ಥಿಗಳ ಅಪಹರಣ ಮತ್ತು ಹಲ್ಲೆ ನಡೆಯುವ ಮಟ್ಟಕ್ಕೆ ಹೋಗಿದೆ.
ಅಪಹರಣಕ್ಕೆ ಒಳಗಾದ ಬಾಲಕ ತನ್ನ ಕಾಲೇಜಿನ ಇನ್ನೊಬ್ಬ ವಿದ್ಯಾರ್ಥಿ ಹಾಗೂ ಸ್ನೇಹಿತನಾದ ಬೇರೊಂದು ಕಾಲೇಜಿನ ವಿದ್ಯಾರ್ಥಿ (ಮೂವರೂ ಅಪ್ರಾಪ್ತ ವಯಸ್ಸಿನವರು) ಜೊತೆ ಸೋಮವಾರ ಸಂಜೆ 6.15ರ ಸುಮಾರಿಗೆ ಪಾಂಡೇಶ್ವರದ ಪೋರಮ್ ಮಾಲ್ ಬಳಿ ನಿಂತುಕೊಂಡಿದ್ದ. ಆಗ ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳ ಗುಂಪು ಅಲ್ಲಿಗೆ ಬಂದಿತ್ತು. ಅದರಲ್ಲಿ ದಿಯಾನ್, ತಸ್ಲೀಮ್ ಹಾಗೂ ಸಲ್ಮಾನ್ ಹಾಗೂ ಇಬ್ಬರು ಅಪ್ರಾಪ್ತ ವಯಸ್ಸಿನವರು ಸೇರಿದಂತೆ ಐವರು ಆ ಗುಂಪಿನಲ್ಲಿ ಇದ್ದರು. ಅವರು ಏಕಾಏಕಿ ಜಗಳ ತೆಗದು ಕೈಯಲ್ಲಿ ಹಲ್ಲೆ ನಡೆಸಿ ಕಾಲಿನಿಂದ ಒದ್ದರು. ತನ್ನನ್ನು ಮತ್ತು ತನ್ನ ಇಬ್ಬರು ಗೆಳೆಯರನ್ನೂ ಕಾರಿನೊಳಕ್ಕೆ ಹತ್ತಿಸಿ ಅಪಹರಿಸಿದರು ಎಂದು ಸಂತ್ರಸ್ತ ವಿದ್ಯಾರ್ಥಿ ದೂರು ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಕಾರಿನಲ್ಲಿ ಕರೆದೊಯ್ದ ಬಳಿಕ ಮಹಾಕಾಳಿ ಪಡ್ಪು, ಜಪ್ಪು ಮಹಾಕಾಳಿಪಡ್ಪು ಮಸೀದಿಗೆ ಕರೆದೊಯ್ದು ಅಲ್ಲೂ ಹಲ್ಲೆ ನಡೆಸಿದರು. ಹಲ್ಲೆ ನಡೆಸುವ ದೃಶ್ಯಗಳ ವಿಡಿಯೊವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡರು. ಮತ್ತೆ ಮೂವರನ್ನೂ ಬಿಟ್ಡು ಕಳುಹಿಸಿದರು ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ಆರೋಪಿಸಿದ್ದಾರೆ' ಎಂದು ಪೊಲೀಸರು ತಿಳಿಸಿದರು.
'ಸಂತ್ರಸ್ತ ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರ ಮೂವರು ವಿದ್ಯಾರ್ಥಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.