ಬುಧವಾರ, ಜೂನ್ 16, 2021
22 °C
ಮಂಗಳೂರು ವಿ.ವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಕುಲಪತಿ ಪ್ರೊ.ಯಡಪಡಿತ್ತಾಯ

ಸೆಪ್ಟೆಂಬರ್‌ನಲ್ಲಿ ಅಂತಿಮ ಸೆಮಿಸ್ಟರ್ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಡಿಪು: ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಮಂಗಳೂರು ವಿಶ್ವವಿದ್ಯಾಲಯದ ಪದವಿ 6ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿ 4 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಮೌಲ್ಯಮಾಪನಕ್ಕೆ ಡಿಜಿಟಲ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ತಿಳಿಸಿದರು.

ಮಂಗಳವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಂಬಿಎ ಡಿಜಿಟಲ್ ಮೌಲ್ಯಮಾಪನದ ಯಶಸ್ಸಿನಿಂದಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ಗಳ ಮೌಲ್ಯಮಾಪನವನ್ನು ಡಿಜಿಟಲ್ ತಂತ್ರಾಂಶದ ಮೂಲಕ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಮೂರು ಜಿಲ್ಲೆಗಳಲ್ಲಿ ಕೇಂದ್ರಗಳನ್ನು ಗುರುತಿಸಲಾಗುವುದು ಎಂದು ಹೇಳಿದರು.

ಕಂಟೈನ್‌ಮೆಂಟ್ ವಲಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಕೋವಿಡ್ –19 ಸೋಂಕು ತಗುಲಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಅವರಿಗೂ ಅವಕಾಶ ಮಾಡಿಕೊಡಲಾಗುವುದು. ಸೆಪ್ಟೆಂಬರ್‌ನಲ್ಲಿ ನಡೆಯುವ ಪರೀಕ್ಷೆಗೆ ಹಾಜರಾಗಲು ಅನಾನುಕೂಲವಾಗುವ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಸುಧಾರಿಸಿದ ಬಳಿಕ ಜನವರಿಯಲ್ಲಿ ವಿಶೇಷ ಪರೀಕ್ಷೆ ಮಾಡಲಾಗುವುದು. ಅವರನ್ನು ಹೊಸ ಅಭ್ಯರ್ಥಿಗಳಾಗಿಯೇ ಪರಿಗಣಿಸಲಾಗುವುದು ಎಂದು ವಿವರಿಸಿದರು.

ಪದವಿಯ 2ನೇ ಮತ್ತು 4 ನೇ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳ ಮತ್ತು ಇತರ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮೇಲೆ ಶ್ರೇಣಿ ನೀಡಲಾಗುವುದು. ಫಲಿತಾಂಶದಲ್ಲಿ ತೃಪ್ತಿ ಇಲ್ಲದಿದ್ದರೆ ಮುಂದೆ ನಡೆಯುವ ಪರೀಕ್ಷೆಗೆ ಹಾಜರಾಗಬಹುದು. ಆದರೆ ಫಲಿತಾಂಶದ 15 ದಿನಗಳ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು ಎಂದು ಪ್ರೊ.ಯಡಪಡಿತ್ತಾಯ ತಿಳಿಸಿದರು.

ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ, ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಬಿ.ನಾರಾಯಣ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಲಾಲಾಜಿ ಮೆಂಡನ್ ಭಾಗವಹಿಸಿದ್ದರು.

ಬಜೆಟ್‌ಗೆ ಅನುಮೋದನೆ
ಮಂಗಳೂರು ವಿಶ್ವವಿದ್ಯಾಲಯದ 2020–21 ನೇ ಸಾಲಿನ ₹ 383.14 ಕೋಟಿ ಮೊತ್ತದ ಮುಂಗಡ ಪತ್ರಕ್ಕೆ ಮಂಗಳವಾರ ನಡೆದ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿದೆ.

ವಿಶ್ವವಿದ್ಯಾಲಯದ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಬಿ.ನಾರಾಯಣ ಅವರು ಮುಂಗಡ ಪತ್ರವನ್ನು ಮಂಡಿಸಿದರು.
₹385.39 ಕೋಟಿ ವೆಚ್ಚವನ್ನು ನಿರೀಕ್ಷಿಸಲಾಗಿದೆ. ₹ 2.25 ಕೋಟಿ ಕೊರತೆ ಬಜೆಟ್‌ ಇದಾಗಿದೆ. ಕಳೆದ ವರ್ಷ ₹5.10 ಕೋಟಿ ಕೊರತೆ ಬಜೆಟ್‌ ಮಂಡಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಸಾಲಿನಲ್ಲಿ ಕೊರತೆ ₹2.85 ಕೋಟಿ ಕಡಿಮೆಯಾಗಿದೆ ಎಂದು ಪ್ರೊ.ನಾರಾಯಣ ಸಭೆಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು