ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರುಳಿನ ಉರಿಯೂತ ಅಧ್ಯಯನಕ್ಕೆ ‘ಡ್ರೋಸೋಫಿಲ ಕೀಟ’ ಬಳಕೆ

ಮಂಗಳೂರು ವಿವಿ ಅನ್ವಯಿಕ ಪ್ರಾಣಿ ವಿಜ್ಞಾನ ವಿಭಾಗದ ತಂಡ ಅಧ್ಯಯನ
Published : 20 ಸೆಪ್ಟೆಂಬರ್ 2022, 2:21 IST
ಫಾಲೋ ಮಾಡಿ
Comments

ಮುಡಿಪು: ಮನುಷ್ಯರಲ್ಲಿ ಇತ್ತೀಚಿಗೆ ಕರುಳಿನ ಉರಿಯೂತ (Inflammatory Bowel Disease - IBD) ಸಮಸ್ಯೆ ಸಾಮಾನ್ಯವಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿ ವಿಜ್ಞಾನ ವಿಭಾಗದ ಸಂಶೋಧನಾ ತಂಡವು ಡ್ರೋಸೋಫಿಲವನ್ನು (ಹಣ್ಣಿನ ನುಸಿ) ಸಂಶೋಧನಾ ಕೀಟ ಮಾದರಿಯಾಗಿ ಬಳಸಿ ಡಿ.ಎಸ್.ಎಸ್ ರಾಸಾಯನಿಕದಿಂದ ಕೀಟಗಳಲ್ಲಿ ಕರುಳಿನ ಉರಿಯೂತ ಪ್ರಯೋಗದ ಬಗ್ಗೆ ಅಧ್ಯಯನ ನಡೆಸುತ್ತಿದೆ.

ಕರುಳಿನ‌ ಉರಿಯೂತದ ಬಗ್ಗೆ ಮನುಷ್ಯರಲ್ಲಿ ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ಕಷ್ಟಸಾಧ್ಯ. ಆದುದರಿಂದ ಮನುಷ್ಯರಂತೆಯೇ ದೇಹ ರಚನೆಯನ್ನು ಹೊಂದಿರುವ ಪ್ರಾಣಿ ಮಾದರಿಯಾದ ಇಲಿಗಳಲ್ಲಿ ಕೆಲವು ರಾಸಾಯನಿಕ (ಡೆಕ್ಸ್ಟ್ರಾನ್ ಸೋಡಿಯಂ ಸಲ್ಫೇಟ್ – ಡಿ.ಎಸ್.ಎಸ್) ಉಪಯೋಗದ ಮೂಲಕ ಕರುಳಿನ ಉರಿಯುತ ಬೆಳೆಯುವಂತೆ ಮಾಡಿ ಅಧ್ಯಯನ ಮಾಡಬಹುದಾಗಿದೆ. ಇಲಿಗಳ ಅಧ್ಯಯನದ ಮೇಲೆ ಹಲವಾರು ವೈಜ್ಞಾನಿಕ ನಿರ್ಬಂಧ ಇರುವುದರಿಂದ ಈ ರೀತಿಯ ಪ್ರಯೋಗಗಳು ಸಾಧ್ಯವಾಗುತ್ತಿಲ್ಲ.

ಹೊಸ ಅಧ್ಯಯನ ಸಾಧ್ಯತೆಗಳ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿ ವಿಜ್ಞಾನ ವಿಭಾಗದ ಡಾ.ಶಾಮ್ ಪ್ರಸಾದ್, ವಾರಿಜಾ ರಘು ಹಾಗೂ ಜೀವ ರಸಾಯನಿಕ ವಿಜ್ಞಾನ ವಿಭಾಗದ ಡಾ.ಅವಿನಾಶ್ ಕುಡುವ ಅವರ ಮಾರ್ಗದರ್ಶನದಲ್ಲಿ ವಿಭಾಗದ ಸ್ನಾತೋತ್ತರ ವಿದ್ಯಾರ್ಥಿಗಳಾದ ನಿಶಾಲ್ ಕೇಶವ್, ರಮ್ಯ ಲಕ್ಷ್ಮಿ, ಶಶಿಧರ್ ಡ್ರೋಸೋಫಿಲವನ್ನು ಸಂಶೋಧನಾ ಕೀಟ ಮಾದರಿಯಾಗಿ ಬಳಸಿ ಡಿ.ಎಸ್.ಎಸ್ ರಾಸಾಯನಿಕದಿಂದ ಕೀಟಗಳಲ್ಲಿ ಕರುಳಿನ ಉರಿಯುತ ಮಾಡುವಂತೆ ಅಧ್ಯಯನ ಮಾಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಹಲವಾರು ಕಿಣ್ವಗಳ ಪಾತ್ರ ಹಾಗೂ ಉರಿಯುತ ಶಮನದ ಮಾರ್ಗಗಳನ್ನು ಅಭ್ಯಸಿಸಲಾಗಿದೆ. ಮಾನವನ ದೇಹಕ್ರಿಯೆಯಲ್ಲಿರುವ ಹಲವಾರು ನ್ಯೂನತೆಗಳನ್ನು ಅಧ್ಯಯನ ಮಾಡುವಲ್ಲಿ ಈ ಕೀಟದ ಮಾದರಿ ಉಪಯುಕ್ತವಾಗಿದ್ದು, ಇದೀಗ ಕರುಳಿನ ರೋಗಗಳಿಗೂ ಬಳಕೆಯಾಗುವ ಅಗತ್ಯವನ್ನು ತೋರಿದೆ. ಮನುಷ್ಯನ ಕ್ರಿಯಾ ವಿಜ್ಞಾನ (ಶರೀರ ವಿಜ್ಞಾನ) ಹಾಗೂ ವಂಶವಾಹಿಗಳಲ್ಲಿ ಶೇ 75 ಹೋಲಿಕೆ ಹೊಂದಿರುವ ಡ್ರೋಸೋಫಿಲ ಮುಂದಿನ ದಿನಗಳಲ್ಲಿ ಉತ್ತಮ ಉರಿಯೂತದ ಅಧ್ಯಯನ ಮಾದರಿಯಾಗಲಿದೆ ಎಂದು ಆನ್ವಯಿಕ ಪ್ರಾಣಿ ವಿಜ್ಞಾನ ವಿಭಾಗದ ಡಾ.ಶ್ಯಾಮ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT