ಮಂಗಳೂರು: ಅಂದು 2010ರ ಮೇ 22. ಆಗಿನ್ನೂ ಮುಂಜಾನೆ 6.03 ನಿಮಿಷ. ದುಬೈನಿಂದ ಒಟ್ಟು 166 ಪ್ರಯಾಣಿಕರನ್ನು ಕರೆತಂದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ 812 ವಿಮಾನದ ಪೈಲಟ್ ಝ್ಲಾಟ್ಕೊ ಗ್ಲುಸಿಕಾ ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನವನ್ನು ಇಳಿಸುವುದಕ್ಕೆ ಸಜ್ಜಾಗುತ್ತಿದ್ದರು. ಅಷ್ಟರಲ್ಲಿ ಘೋರ ದುರಂತವೇ ಸಂಭವಿಸಿತ್ತು.

ರನ್ವೆಯಲ್ಲಿ ಇಳಿಯಬೇಕಾದ ಜಾಗಕ್ಕಿಂತ ಸ್ವಲ್ಪ ಮುಂದೆ (5200 ಅಡಿ) ವಿಮಾನ ಭೂಸ್ಪರ್ಶಮಾಡಿತ್ತು. ವೇಗವನ್ನು ನಿಯಂತ್ರಿಸಿ ವಿಮಾನದ ಪೂರ್ತಿ ಸಿಲ್ಲಿಸುವುದಕ್ಕೆ ಇದ್ದುದು 2800 ಅಡಿ ಉದ್ದದ ರನ್ವೇ ಮಾತ್ರ. ಅಷ್ಟರಲ್ಲಿ ಪೈಲಟ್ ಬಾಯಿಂದ ‘ಓ ಮೈ ಗಾಡ್’ ಉದ್ಗಾರ ಹೊರ ಬಿದ್ದಿತ್ತು. ಅನಾಹುತ ಸಂಭವಿಸಬಹುದು ಎಂಬ ಸುಳಿವು ಸಿಗುತ್ತಲೇ ಸಹಪೈಲಟ್ ಎಚ್.ಎಸ್.ಅಹ್ಲುವಾಲಿಯ ವಿಮಾನವನ್ನು ಮತ್ತೆ ಮೇಲೆಕ್ಕೆ ಹಾರಿಸುವಂತೆ ಪದೇ ಪದೇ ಸಲಹೆ ನೀಡಿದ್ದರೂ ಪೈಲಟ್ ಗ್ಲುಸಿಕಾ ಕಡೆಗಣಿಸಿದ್ದ. ಪೈಲಟ್ ಬ್ರೇಕ್ ಹಾಕಿ, ರಿವರ್ಸ್ ಥ್ರಸ್ಟ್ ಎಳೆದು ವಿಮಾನವನ್ನು ನಿಲ್ಲಿಸಲು ಯತ್ನಿಸುವಷ್ಟರಲ್ಲಿ ಅದು ರನ್ವೇ ಅಂಚನ್ನು ದಾಟಿ, ರನ್ವೇ ತುದಿಯ ಸುರಕ್ಷತಾ ಪ್ರದೇಶಕ್ಕೆ (ರೇಸಾ) ನುಗ್ಗಿತ್ತು. ಇನ್ನು ವಿಮಾನ ನಿಲ್ಲಿಸಲು ಸಾಧ್ಯವಿಲ್ಲ ಎಂಬುದನ್ನರಿತ ಪೈಲಟ್ ವಿಮಾನವನ್ನು ಮತ್ತೆ ಹಾರಾಟ ನಡೆಸಲು ಯತ್ನಿಸಿದ್ದ. ಇನ್ನೇನು ಮೇಲಕ್ಕೇರಿತು ಎನ್ನುವಷ್ಟರಲ್ಲಿ ವಿಮಾನದ ಬಲ ರೆಕ್ಕೆ ವಿಮಾನ ನಿಲ್ದಾಣದಲ್ಲಿ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ನ ಲೋಕಲೈಸರ್ ಆಂಟೆನಾ ಅಳವಡಿಸಿದ್ದ ಗೋಪುರದ ಕಾಂಕ್ರೀಟ್ ರಚನೆಗೆ ಬಡಿದಿತ್ತು. ನಿಯಂತ್ರಣ ಕಳೆದುಕೊಂಡ ವಿಮಾನವು ಬಜಪೆಯ ಟೇಬಲ್ ಟಾಪ್ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಕೆಂಜಾರಿನ ಪ್ರಪಾತಕ್ಕೆ ಉರುಳಿತ್ತು.

ಕೆಲವರು ಮುಂಜಾನೆಯ ಸಿಹಿನಿದ್ರೆಯಲ್ಲಿದ್ದರೆ, ಇನ್ನುಳಿದವರು ಇನ್ನೇನು ಮನೆ ಸೇರಬಹುದೆಂಬ ತವಕದಲ್ಲಿದ್ದರು. ಆದರೆ ಪೈಲಟ್ ಮಾಡಿದ್ದ ಅರೆಕ್ಷಣದ ಅಚಾತುರ್ಯ ಅವರ ಭವಿಷ್ಯವನ್ನೇ ಕಿತ್ತುಕೊಂಡಿತ್ತು. ವಿಮಾನ ನೆಲಕ್ಕಪ್ಪಳಿಸಿದಾಗ ಸಂಭವಿಸಿದ ಸ್ಫೋಟದ ಬೆಂಕಿ ವಿಮಾನದಲ್ಲಿದ್ದ ನಾಲ್ವರು ಮಕ್ಕಳು ಸೇರಿದಂತೆ 158 ಪ್ರಯಾಣಿಕರ ಜೀವವನ್ನೇ ಆಪೋಶನಪಡೆದಿತ್ತು. ಅವರ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದವು. ಈ ನಡುವೆಯೂ ಎಂಟು ಮಂದಿ ಪವಾಡ ಸದೃಶವಾಗಿ ಬದುಕಿದ್ದರು.

ಕರಕಲು ದೇಹಗಳ ಕರಾಳ ನೆನಪು: ವಿಮಾನಪತನದ ಸುದ್ದಿ ಮಿಂಚಿನಂತೆ ಹಬ್ಬಿತ್ತು. ವಿಮಾನ ಬಿದ್ದು ಒಂದು ಗಂಟೆ ಕಳೆಯುವಷ್ಟರಲ್ಲಿ ವಿಮಾನದ ಅವಶೇಷವಿದ್ದ ಕೆಂಜಾರಿನ ಪ್ರಪಾತದ ಬಳಿ ನೂರಾರು ಮಂದಿ ಸೇರಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವ ಧಾವಂತದಲ್ಲಿದ್ದವರಿಗೆ ಸಿಕ್ಕಿದ್ದು ಕರಕಲಾದ ಮೃತದೇಹಗಳು ಮಾತ್ರ. ಸುಮಾರು 100 ಅಡಿಗೂ ಹೆಚ್ಚು ಆಳದ ಪ್ರಪಾತದಿಂದ ಪ್ರಯಾಣಿಕರ ಮೃತದೇಹಗಳನ್ನು ಮೇಲಕ್ಕೆತ್ತುವುದು ಮತ್ತೊಂದು ಸವಾಲಾಗಿತ್ತು. ನಿಗಿ ನಿಗಿ ಕೆಂಡದಂತಿದ್ದ ವಿಮಾನದ ಅವಶೇಷ ಬಳಿಗೆ ಜನ ಸುಳಿಯಲೂ ಸಾಧ್ಯವಾಗದಷ್ಟು ಬಿಸಿ ಅಲ್ಲಿ ಆವರಿಸಿತ್ತು. ಕಿರಿದಾದ ರಸ್ತೆಯಲ್ಲೇ ಹರಸಾಹಸ ಪಟ್ಟು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿ ನೀರು ಹಾಯಿಸಿದ ಬಳಿಕ ಒಂದೊಂದೇ ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಅಷ್ಟರಲ್ಲಿ ಮಳೆಯ ರಗಳೆ ಶುರುವಾಗಿತ್ತು. ಅದ್ಯಾವುದನ್ನೂ ಲೆಕ್ಕಿಸದೆ ಸ್ಥಳೀಯರು ವಿಮಾನದಿಂದ ಮೃತದೇಹಗಳನ್ನು ಹೊರತೆಗೆಯುವ ಕಾಯಕದಲ್ಲಿ ಕೈಜೋಡಿಸಿದ್ದರು. ಇಳಿಜಾರಿನಲ್ಲಿ ಜಾರುತ್ತಿದ್ದ ಕಾಲುದಾರಿಯಲ್ಲಿ 158 ಮೃತದೇಹಗಳನ್ನು ಮೇಲಕ್ಕೆತ್ತುವಾಗ ಸಂಜೆಯಾಗಿತ್ತು.

ಬಹುತೇಕ ಶವಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ದುರಂತದ ಸುದ್ದಿ ತಿಳಿದು ದಕ್ಷಿಣ ಕನ್ನಡ, ಚಿಕ್ಕಮಗಳೂರು ಉಡುಪಿ ಜಿಲ್ಲೆಗಳ ಬೇರೆ ಬೇರೆ ಭಾಗಗಳಿಂದ, ಪಕ್ಕದ ಕೇರಳದಿಂದ ಬಂಧುಗಳು ಧಾವಿಸಿ ಬಂದಿದ್ದರು. ಆಸ್ಪತ್ರೆಗಳಲ್ಲಿ ಸಾಲಾಗಿ ಮಲಗಿಸಿದ್ದ ಗುರುತೇ ಸಿಗದ ಮೃತದೇಹಗಳ ಮುಂದೆ ತಮ್ಮವರನ್ನು ಗುರುತಿಸಲು ಸಾಧ್ಯವಾಗದೇ ಬಂಧುಗಳು ಬಿಕ್ಕುತ್ತಿದ್ದ ಬಂಧುಗಳನ್ನು ಸಂತೈಸುವ ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ. ಸಾಲು ಸಾಲು ಹೆಣಗಳಲ್ಲಿ ಯಾವುದು ತಮ್ಮದೆಂದು ಗುರುತಿಸಲಾಗದೇ ಬಹುತೇಕ ಬಂಧುಗಳು ಅಸಹಾಯಕರಾಗಿದ್ದರು. ಕೆಲವರು ಇನ್ಯಾರದೋ ದೇಹಗಳನ್ನು ತಮ್ಮವೆಂದು ಭಾವಿಸಿ ಮನೆಗೆ ಒಯ್ದಿದ್ದರು. 12 ಮೃತದೇಹಗಳು ಯಾವ ಕುಟುಂಬಕ್ಕೆ ಸೇರಿದ್ದು ಎಂದು ಪತ್ತೆಹಚ್ಚಲು ಕೊನೆಗೂ ಸಾಧ್ಯವಾಗಲೇ ಇಲ್ಲ. ಆ ಕಳೇಬರಗಳನ್ನು ತಣ್ಣೀರುಬಾವಿಗೆ ಹೋಗುವ ರಸ್ತೆ ಬಳಿ ಕೆಲ ದಿನಗಳ ಬಳಿಕ ಸಾಮೂಹಿಕವಾಗಿ ದಫನ ಮಾಡಲಾಯಿತು.

ಸ್ಮಾರಕ: ಈ ವಿಮಾನ ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಕೂಳೂರು ಸೇತುವೆ ಬಳಿ ತಣ್ಣೀರುಬಾವಿ ರಸ್ತೆ ಪಕ್ಕ ಸ್ಮಾರಕವನ್ನು ನಿರ್ಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರತಿ ವರ್ಷವೂ ಮೇ 22ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಆರಂಭದ ಕೆಲ ವರ್ಷಗಳಲ್ಲಿ ಈ ದುರಂತದಲ್ಲಿ ಮೃತ ಪಟ್ಟವರ ಬಂಧುಗಳು ಇಲ್ಲಿಗೆ ಬಂದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು. ಈಚಿನ ವರ್ಷಗಳಲ್ಲಿ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. 158 ಮಂದಿಯನ್ನು ಬಲಿಪಡೆದ ಘೋರ ದುರಂತ ಜನರ ಸ್ಮೃತಿಪಟಲದಿಂದ ನಿಧಾನವಾಗಿ ಮರೆಯಾಗಿತ್ತು. ಗುಜರಾತಿನ ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತ ಆ ಕರಾಳ ನೆನಪನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.