ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನನಿಲ್ದಾಣಕ್ಕೆ ಏಕಕಾಲಕ್ಕೆ 3 ಐಎಸ್‌ಒ ಮನ್ನಣೆ

Last Updated 13 ಜೂನ್ 2022, 14:28 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಸಂಯೋಜಿತ ನಿರ್ವಹಣಾ ವ್ಯವಸ್ಥೆಗೆ (ಐಎಂಎಸ್‌) ಸಂಬಂಧಿಸಿದಐಎಸ್‌ಒ 9001:2015 (ಗುಣಮಟ್ಟ ನಿರ್ವಹಣೆ ವ್ಯವಸ್ಥೆ), ಐಎಸ್‌ಒ 14001: 2015 (ಪರಿಸರ ನಿರ್ವಹಣೆ ವ್ಯವಸ್ಥೆ) ಮತ್ತು ಐಎಸ್‌ಒ 45001:2018 (ಔದ್ಯೊಗಿಕ ಆರೋಗ್ಯ ಮತ್ತು ಸುರಕ್ಷತೆ) ಎಂಬ ಮೂರು ಇಂಟರ್‌ನ್ಯಾಷನಲ್‌ ಆರ್ಗನೈಸೇಷನ್‌ ಫಾರ್‌ ಸ್ಟ್ಯಾಂಡರ್ಡೈಸೇಷನ್‌ (ಐಎಸ್‌ಒ) ಪ್ರಮಾಣಪತ್ರಗಳನ್ನು ಏಕಕಾಲದಲ್ಲಿ ಪಡೆದುಕೊಂಡಿದೆ.

ಈ ಪ್ರಮಾಣೀಕರಣ ಪ್ರಕ್ರಿಯೆಯು ಎರಡು ಹಂತಗಳ ಬಾಹ್ಯ ಮೌಲ್ಯಮಾಪಕರಿಂದ ಪರೀಶೀಲನೆಗೆ ಒಳಪಡುತ್ತದೆ. ಟಿಯುವಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಸಾಮರ್ಥ್ಯ, ಸಾಂಸ್ಥಿಕ ಅಪಾಯಗಳು, ಗುಣಮಟ್ಟಗಳು, ವಿಧಾನಗಳು ಮೊದಲಾದ ಪ್ರಮುಖ ಅಂಶಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಮೌಲ್ಯಮಾಪನ ನಡೆಸುತ್ತದೆ. ಈ ಪ್ರಮಾಣಪತ್ರಗಳನ್ನು 2022ರ ಮೇ 16ರಂದು ಪ್ರದಾನ ಮಾಡಲಾಗಿದೆ. ಇವು ಮೂರು ವರ್ಷಗಳ ಕಾಲ ಮಾನ್ಯತೆ ಹೊಂದಿರುತ್ತವೆ. ಮಂಗಳೂರು ವಿಮಾನ ನಿಲ್ದಾಣವನ್ನು ಐಎಸ್‌ಒ ಗುಣಮಟ್ಟಗಳಿಗೆ/ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿ, ನಿರ್ವಹಿಸಲಾಗುತ್ತದೆ ಎಂಬುದನ್ನು ಈ ಪ್ರಮಾಣಪತ್ರಗಳು ಸಾಬೀತುಪಡಿಸಿವೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಐಎಸ್‌ಒ 9001:2015 ಗುಣಮಟ್ಟದ ನಿರ್ವಹಣಾ ವ್ಯವಸ್ಥೆಯ ಮಾನದಂಡವನ್ನು ಐಎಸ್‌ಒ ಅಭಿವೃದ್ಧಿಪಡಿಸುತ್ತದೆ. ಐಎಸ್‌ಒ 14001:2015 ಪರಿಸರ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ಅಗತ್ಯಗಳನ್ನು ನಿರ್ದಿಷ್ಟಪಡಿಸುತ್ತದೆ. ಪರಿಸರ ನಿರ್ವಹಣೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಸಂಸ್ಥೆಗಳು ವ್ಯವಸ್ಥಿತವಾಗಿ ನಿರ್ವಹಿಲಿ ಎಂಬ ಉದ್ದೇಶದಿಂದಲೂ ಇದನ್ನು ನೀಡಲಾಗುತ್ತದೆ.ಪರಿಸರ ನಿರ್ವಹಣೆಯನ್ನು ಸುಧಾರಿಸುವುದಕ್ಕೆ ಇದನ್ನು ಬಳಸಿಕೊಳ್ಳಬಹುದು.

ಐಎಸ್‌ಒ 45001:2018 ಪ್ರಮಾಣಪತ್ರವು ಔದ್ಯೊಗಿಕ ಆರೋಗ್ಯ ಮತ್ತು ಸುರಕ್ಷತೆಯ ನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಅಗತ್ಯಗಳನ್ನು ನಿರ್ದಿಷ್ಟಪಡಿಸುವುದಲ್ಲದೇ, . ಅದರ ಪರಿಪಾಲನೆಗೆ ಮಾರ್ಗದರ್ಶನ ಮಾಡುತ್ತದೆ. ಕೆಲಸದ ವೇಳೆ ಸಿಬ್ಬಂದಿ ಗಾಯಗೊಳ್ಳುವುದು, ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಗಟ್ಟುವ ಮೂಲಕ ಸುರಕ್ಷಿತ ಮತ್ತು ಸ್ವಸ್ಥ ಕಚೇರಿಯನ್ನು ಹೊಂದುವುದಕ್ಕೆ ಹಾಗೂ ಔದ್ಯೊಗಿಕ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣೆಗೆ ಸಂಬಂಧಿಸಿದ ಸುಧಾರಣಾ ಕಾರ್ಯಗಳನ್ನು ಮುಂಚಿತವಾಗಿ ಕೈಗೊಳ್ಳುವುದಕ್ಕೆ ಸಂಸ್ಥೆಯು ಬದ್ಧವಾಗಿರುವಂತೆ ಇದು ಮಾಡುತ್ತದೆ. ಶಾಸನಬದ್ಧವಾಗಿ ಪಾಲಿಸಬೇಕಾದ ನಿಯಮಗಳಿಗೆ ಸಂಬಂಧಿಸಿದಂತೆ ವಿಮಾನನಿಲ್ದಾಣವು ಬದ್ಧತೆ ಪ್ರದರ್ಶಿಸುವುದನ್ನು ಇದು ಎತ್ತಿ ತೋರಿಸುತ್ತದೆ.

ಈ ವಿಮಾನ ನಿಲ್ದಾಣವು ಕಾರ್ಯಾಚರಣೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಉತ್ಕೃಷ್ಟತೆಯ ಚೌಕಟ್ಟುಗಳನ್ನು ಅಳವಡಿಸಿಕೊಂಡು ಅನುಸರಿಸಲು ಮುಂದಾಗಿದೆ. ಏರ್‌ಪೋರ್ಟ್‌ ಕೌನ್ಸಿಲ್‌ ಇಂಟರ್‌ನ್ಯಾಷನಲ್‌ (ಎಸಿಐ) ವಿಮಾನ ನಿಲ್ದಾಣ ಗ್ರಾಹಕರ ಅನುಭವ ಆಧರಿತ ಮಾನ್ಯತಾ ಕಾರ್ಯಕ್ರಮದ ಅಡಿ ಮೊದಲನೇ ಹಂತದ ಮಾನ್ಯತೆಯನ್ನು (ಲೆವೆಲ್–1 ಅಕ್ರೆಡಿಟೇಷನ್‌) ಈ ವಿಮಾನ ನಿಲ್ದಾಣಕ್ಕೆ 2022ರ ಮಾರ್ಚ್‌ನಲ್ಲಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT