ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು ಬೈಪಾಸ್‌ ರಸ್ತೆಗೆ ಡಿಪಿಆರ್‌

ಕೇಂದ್ರ ಭೂಸಾರಿಗೆ ಸಚಿವಾಲಯದಿಂದ ಮುಂದಿನ ಹಂತದಲ್ಲಿ ಅನುಮೋದನೆ: ನಳಿನ್‌
Published 4 ಜೂನ್ 2024, 2:32 IST
Last Updated 4 ಜೂನ್ 2024, 2:32 IST
ಅಕ್ಷರ ಗಾತ್ರ

ಮಂಗಳೂರು: 91.20 ಕಿ.ಮೀ  ಉದ್ದದ ಮಂಗಳೂರು ಬೈಪಾಸ್ ರಸ್ತೆ ನಿರ್ಮಿಸುವ ಪ್ರಸ್ತಾವ ಕೇಂದ್ರ ಭೂಸಾರಿಗೆ ಸಚಿವಾಲಯದ ಮುಂದಿದ್ದು, ಇದಕ್ಕೆ ಮುಂದಿನ ಹಂತದಲ್ಲಿ ಅನುಮೋದನೆ ಸಿಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್‌ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೂಲ್ಕಿ– ಕಿನ್ನಿಗೋಳಿ– ಮೂರುಕಾವೇರಿ– ಕಟೀಲು– ಬಜಪೆ– ಪೊಳಲಿ– ಅಡ್ಡೂರು– ತೆಂಕಬೆಳ್ಳೂರು– ಕಲ್ಪನೆ–ಅಡ್ಡೂರು– ಬಿ.ಸಿ.ರೋಡ್‌ ಮಾರ್ಗವಾಗಿ ಸಾಗುವ ಈ ಬೈಪಾಸ್‌ ರಸ್ತೆಯ ವಿಸ್ತೃತ ಯೋಜನಾ ವರದಿಯೂ (ಡಿಪಿಆರ್‌) ಸಿದ್ಧವಾಗುತ್ತಿದೆ.  ಭೂಸ್ವಾಧೀನ ವೆಚ್ಚವೂ ಸೇರಿ  ಇದಕ್ಕೆ ₹ 3,931 ಕೋಟಿ ಬೇಕಾಗಲಿದೆ ಎಂದರು.

‘ಸಾಣೂರು– ಬಿಕರ್ನಕಟ್ಟೆ ಚತುಷ್ಪಥ ಕಾಮಗಾರಿಯ ಭೂಸ್ವಾಧೀನ ಸಮಸ್ಯೆ ಇತ್ಯರ್ಥಕ್ಕೆ ನಾನು 50ಕ್ಕೂ ಹೆಚ್ಚು ಸಭೆ ನಡೆಸಿದ್ದೇನೆ. ಆದರೂ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಈ ಕಾಮಗಾರಿ ವಿಳಂಬವಾಗಿದೆ. ಈ ಹೆದ್ದಾರಿ ಬಿಕರ್ನಕಟ್ಟೆ ಬಳಿ ಬಂದು ಕೂಡುವಲ್ಲಿನ ವಿನ್ಯಾಸ ಇನ್ನೂ ಅಂತಿಮಗೊಂಡಿಲ್ಲ’ ಎಂದು ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟಿಯಲ್ಲಿ ಸುರಂಗ ಹಾಗೂ ವಯಡಕ್ಟ್‌ಗಳನ್ನು ನಿರ್ಮಿಸಿ ಹೆದ್ದಾರಿ ಅಭಿವೃದ್ಧಿಪಡಿಸುವ ₹ 2,538 ಕೋಟಿ ಮೊತ್ತದ ಕಾಮಗಾರಿಯ ಡಿಪಿಆರ್‌ ಸಿದ್ಧವಾಗಿದೆ. ಒಟ್ಟು 30.421 ಕಿ.ಮೀ ಉದ್ದದ ದ್ವಿಪಥ ಹೆದ್ದಾರಿ ಇದಾಗಲಿದೆ. ಇದರಲ್ಲಿ 3.80 ಕಿ.ಮೀ ಉದ್ದದ ಸುರಂಗ ಹಾಗೂ 11.18 ಕಿ.ಮೀ ಉದ್ದದ ವಯಡಕ್ಟ್ ಇರಲಿದೆ.’

‘ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಣಂಬೂರಿನ ಕೆಐಒಸಿಎಲ್‌ ಪ್ರದೇಶದಿಂದ ಬೈಕಂಪಾಡಿವರೆಗೆ ಷಟ್ಪಥ ಮೇಲ್ಸೇತುವೆ ನಿರ್ಮಿಸುವ ಯೋಜನೆಗೆ ₹ 3,500 ಕೋಟಿಯ ಡಿಪಿಆರ್‌ ಸಿದ್ಧವಾಗುತ್ತಿದೆ’ ಎಂದರು.

‘ಜಿಲ್ಲೆಯ ಅಭಿವೃದ್ಧಿಗೆ ಶ್ರೀನಿವಾಸ ಮಲ್ಯರ ಆದಿಯಾಗಿ ಎಲ್ಲ ಸಂಸದರ ಕೊಡುಗೆ ಇದೆ. ನನ್ನ ಅವಧಿಯಲ್ಲಿ ₹ 1.80 ಲಕ್ಷ ಕೋಟಿ ಅನುದಾನ ಜಿಲ್ಲೆಗೆ ಮಂಜೂರಾಗಿದ್ದು, ₹ 80ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಇನ್ನು ಮುಂದೆ ಸಂಸದರಾಗುವವರು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ ’ ಎಂದರು.

ಕಾಮಗಾರಿಯಿಂದ ಸಮಸ್ಯೆ ಸಹಜ: ‘ಬಿ.ಸಿ.ರೋಡ್‌ ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಕಾಮಗಾರಿ ಹಾಗೂ ಕಲ್ಲಡ್ಕದ 1.25 ಕಿ.ಮೀ ಉದ್ದದ ಮೇಲ್ಸೇತುವೆ  ಕಾಮಗಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಅರಿವಿದೆ. ಇಲ್ಲಿ ಸರ್ವಿಸ್‌ ರಸ್ತೆಗೆ  ಎರಡು ಸಲ ಡಾಂಬರು ಹಾಕಿದರೂ ಸಮಸ್ಯೆ ನೀಗಿಲ್ಲ. ಸರ್ವಿಸ್ ರಸ್ತೆಗೆ ಡಾಂಬರ್‌ ಬದಲು ಕಾಂಕ್ರೀಟ್‌ ಹಾಕಲು ಗುತ್ತಿಗೆದಾರರು ಒಪ್ಪಿದ್ದಾರೆ. ಕಲ್ಲಡ್ಕ ಮೇಲ್ಸೇತುವೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ‘ ಎಂದರು.

ಸಂವಾದದಲ್ಲಿ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದರು – ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದರು – ಪ್ರಜಾವಾಣಿ ಚಿತ್ರ

‘ಪಾಲ್ಘಾಟ್‌ ವಿಭಾಗದ 13 ಕಿ.ಮೀ ಹಳಿ ಮೈಸೂರು ವಿಭಾಗಕ್ಕೆ

ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸುವುದಕ್ಕೆ ಕೆಲವು ಅಡ್ಡಿಗಳಿವೆ. ಇಲ್ಲಿ ಕೊಂಕಣ ರೈಲ್ವೆಯದು ಪ್ರತ್ಯೇಕ ಪ್ರಾಧಿಕಾರ. ಇಲ್ಲಿ ಪಾಲ್ಘಾಟ್ ವಿಭಾಗಕ್ಕೆ ಸೇರಿದ 13 ಕಿ.ಮೀ. ಉದ್ದದ ರೈಲು ಮಾರ್ಗ ಇದೆ. ಕನಿಷ್ಠ ಪಕ್ಷ ಅದನ್ನು ಮೈಸೂರು ವಿಭಾಗಕ್ಕೆ ಸೇರಿಸುವಂತೆ ಕೋರಿದ್ದು ಇದು ಈಡೇರುವ ವಿಶ್ವಾಸವಿದೆ ಎಂದು ನಳಿನ್ ತಿಳಿಸಿದರು. ಮಂಗಳೂರು– ಗೋವಾ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಮುಂಬೈಗೆ ವಿಸ್ತರಣೆಗೊಳ್ಳಲಿದೆ. ಮಂಗಳೂರು– ಬೆಂಗಳೂರು ನಡುವೆ ಹಳಿ ವಿದ್ಯುದೀಕರಣ ಬಾಕಿ ಇದ್ದು ಬಳಿಕ ಈ ಮಾರ್ಗಕ್ಕೂ ವಂದೇ ಭಾರತ್‌ ರೈಲು ಮಂಜೂರಾಗಲಿದೆ ಎಂದರು.

ನಂತೂರು ಮೇಲ್ಸೇತುವೆ ಶೀಘ್ರ ಕಾಮಗಾರಿ

‘ನಗರದ ನಂತೂರಿನ ಮೇಲ್ಸೇತುವೆಯ ಭೂಸ್ವಾಧೀನ ಸಮಸ್ಯೆ ಬಹುತೇಕ ಇತ್ಯರ್ಥಗೊಂಡಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ’ ಎಂದು ನಳಿನ್  ತಿಳಿಸಿದರು.

‘ನಂತೂರು ಮೇಲ್ಸೇತುವೆಯ ವಿನ್ಯಾಸಕ್ಕೆ ಸಂಬಂಧಿಸಿ ಎನ್‌ಎಚ್‌ಎಐ ಹಾಗೂ  ಪಾಲಿಕೆ ನಡುವೆ ಭಿನ್ನಾಭಿಪ್ರಾಯ ಇತ್ತು. ಅದು ಇತ್ಯರ್ಥವಾದ ಬಳಿಕ ಭೂಸ್ವಾಧೀನ ಪ್ರಶ್ನಿಸಿ ಇಲ್ಲಿನ ನಿವಾಸಿಯೊಬ್ಬರು ನ್ಯಾಯಾಲಯದ ಮೊರೆ ಹೋದರು. ಹಾಗಾಗಿ ಕಾಮಗಾರಿ ಅನುಷ್ಠಾನ ವಿಳಂಬವಾಗಿದೆ’ ಎಂದರು.  ಕೆಪಿಟಿ ಮೇಲ್ಸೇತುವೆ ಕಾಮಗಾರಿಗೆ ಇದ್ದ ತೊಡಕುಗಳೂ ನಿವಾರಣೆ ಆಗಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT